ದಾವಣಗೆರೆ :ಅವರು ಮೂಲತಃ ಆಂಧ್ರದಿಂದ ಆಗಮಿಸಿ ದಾವಣಗೆರೆಯ ಸುತ್ತಮುತ್ತ ಕೃಷಿ ಚಟುವಟಿಕೆ ಮಾಡ್ತಾ ಜೀವನ ಸಾಗಿಸುತ್ತಿದ್ದವರು. ಯಾರೋ ದುರುಳರು ಬಂದು ಆ ರೈತನ ಹೊಲಕ್ಕೆ ನೀರು ಕಟ್ಟುವ ಕಾಲುವೆಯ ನೀರಿಗೆ ಟ್ಯಾಂಕರ್ ಮೂಲಕ ರಾಸಾಯನಿಕ ತ್ಯಾಜ್ಯ (ಕೆಮಿಕಲ್) ಸುರಿದ ಬೆನ್ನಲ್ಲೇ ಅವರ ಬದುಕು ಬರ್ಬಾದ್ ಆಗಿದೆ. ನೀರಿನಲ್ಲಿ ರಾಸಾಯನಿಕ ಹರಿದುಬಂದು ಹೊಲ ಸೇರಿದ್ದರಿಂದ ಇಡೀ ಭತ್ತದ ಪೈರು ಕಪ್ಪು ಬಣ್ಣಕ್ಕೆ ತಿರುಗಿ ಸುಟ್ಟಿರುವ ರೀತಿ ಭಾಸವಾಗುತ್ತಿದೆ. ಸಾಲಸೋಲ ಮಾಡಿ ಬೆಳೆದಿದ್ದ ಬೆಳೆ ನೆಲಕಚ್ಚಿದ್ದರಿಂದ ಅನ್ನದಾತ ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾನೆ.
ದಾವಣಗೆರೆಯ ಹೊರವಲಯದ ಬಾತಿ ಕೆರೆ ಕಾಲುವೆಯ ಕೂಗಳತೆಯಲ್ಲಿ ಭತ್ತ ಬೆಳೆಯುವ ರೈತನ ಬದುಕು ಕೆಮಿಕಲ್ ರಾಸಾಯನಿಕದಿಂದ ಸಂಕಷ್ಟಕ್ಕೆ ಸಿಲುಕಿದೆ. ಈ ಮಹಾಮಾರಿ ಕೆಮಿಕಲ್ನಿಂದಾಗಿ ರೈತ ಬೆಳೆದಿದ್ದ ಭತ್ತದ ಬೆಳೆ ಸುಟ್ಟು ಹೋಗುತ್ತಿದೆ. ದಾವಣಗೆರೆ ತಾಲೂಕಿನ ಕಡ್ಲೆಬಾಳು ಗ್ರಾಮದ ರೈತ ವಾಸು ಎನ್ನುವರು ಬೇರೆಯವರ ಜಮೀನನ್ನು ಗುತ್ತಿಗೆ ಪಡೆದು ಬೆಳೆ ಬೆಳೆದಿದ್ದು, ಒಂದು ಎಕರೆ ಭತ್ತದ ಗದ್ದೆ ಸಂಪೂರ್ಣ ಹಾಳಾಗಿದೆ.
ಈ ಗದ್ದೆಗೆ ಕೆಮಿಕಲ್ ನೀರು ಸೇರ್ಪಡೆಯಾದ ಹಿನ್ನೆಲೆ ಬೆಳೆಯುವ ಪೈರು ಕಪ್ಪು ಬಣ್ಣಕ್ಕೆ ತಿರುಗಿ, ಸುಟ್ಟ ರೀತಿ ಕಾಣುತ್ತಿದೆ. ಈ ಜಮೀನಿಗೆ ಹಾಯಿಸುವ ನೀರು ಭದ್ರ ಚಾನಲ್ನಿಂದ ಬರುತ್ತಿದ್ದು, ಆ ಕೆನಾಲ್ಗೆ ಆಸಿಡ್ ಮಿಶ್ರಿತ ಕೆಮಿಕಲ್ ಅನ್ನು ಟ್ಯಾಂಕರ್ ಮೂಲಕ ದುಷ್ಕರ್ಮಿಗಳು ರಾತ್ರೋರಾತ್ರಿ ಸುರಿದಿದ್ದರಿಂದ ಈ ಅನಾಹುತಕ್ಕೆ ಕಾರಣವಾಗಿದೆ. ಇದರಿಂದ ಭದ್ರ ಕೆನಾಲ್ ನೀರು ಸಂಪೂರ್ಣ ಕಲುಷಿತವಾಗಿದೆ. ಈ ನೀರು ವಾಸು ಅವರ ಜಮೀನಿಗೆ ಹರಿದಿದ್ದು, ಇದರಿಂದ ಭತ್ತದ ಪೈರು ಸಂಪೂರ್ಣ ಹಾಳಾಗಿದೆ.
ಕಪ್ಪು ಬಣ್ಣಕ್ಕೆ ತಿರುಗಿದ ಬೆಳೆ : ಈ ಬಗ್ಗೆ ರೈತ ವಾಸು ಮಾತನಾಡಿ, ''ಜಮೀನಿಗೆ ಬರುವ ನೀರಿನ ಕಾಲುವೆಗೆ ಕೆಮಿಕಲ್ ಅನ್ನು ಕಿಡಿಗೇಡಿಗಳು ಸುರಿದು ಹೋಗಿದ್ದರಿಂದ ಭತ್ತ ಕಪ್ಪು ಬಣ್ಣಕ್ಕೆ ತಿರುಗಿದೆ. ಯಾವ ಕೆಮಿಕಲ್ ಅನ್ನೋದು ಗೊತ್ತಾಗುತ್ತಿಲ್ಲ. ನಾವು ಜಮೀನಿಗೆ ನೀರು ಕಟ್ಟುವ ಕಾಲುವೆ ನೀರಿಗೆ ಟ್ಯಾಂಕರ್ ಮೂಲಕ ಕೆಮಿಕಲ್ ಡಂಪ್ ಮಾಡಿದ್ದಾರೆ. ಇದು ಎರಡನೇ ಬಾರಿ ಸುರಿದಿದ್ದು, ನೀರು ಕಟ್ಟಿದ್ದರಿಂದ ಜಮೀನಿನಲ್ಲಿ ಭತ್ತ ಕಪ್ಪು ಬಣ್ಣಕ್ಕೆ ತಿರುಗಿದೆ. ನಿಧಾನವಾಗಿ ಈ ಕೆಮಿಕಲ್ ಇಡೀ ಬೆಳೆಗೆ ಆವರಿಸುತ್ತಿದೆ. ನಾವು ಕಾಳುಗುತ್ತಿಗೆ ಹಿಡಿದು ಬೇರೆಯವರ ಹೊಲ ಮಾಡ್ತಿದ್ದೇವೆ. ಕಿಡಿಗೇಡಿಗಳು ಈ ರೀತಿ ಮಾಡಿದ್ದು ಯಾವ ನ್ಯಾಯ?. ಈ ರೀತಿ ನಮ್ಮ ಜಮೀನಿಗೆ ಈ ಕೆಮಿಕಲ್ ನೀರು ಬಿಟ್ಟಿದ್ದರಿಂದ ಇಡೀ ಹೊಲ ಸುಟ್ಟು ಹೋಗಿರುವ ರೀತಿ ಭಾಸವಾಗುತ್ತಿದೆ'' ಎಂದು ಅಳಲನ್ನು ತೋಡಿಕೊಂಡ್ರು.