ದಾವಣಗೆರೆ: ರಸ್ತೆ, ಉದ್ಯಾನವನಗಳಲ್ಲಿ ಹಾಗೂ ಅನಧಿಕೃತ ಧಾರ್ಮಿಕ ಕಟ್ಟಡಗಳನ್ನು ತೆರವುಗೊಳಿಸುವ ಬಗ್ಗೆ ಸಾರ್ವಜನಿಕನಿಕರು ಆಕ್ಷೇಪ ವ್ಯಕ್ತಪಡಿಸಬಾರದು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹೇಳಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾತನಾಡಿದ ಅವರು, ಈ ಬಗ್ಗೆ ಆರು ವಾರದೊಳಗಾಗಿ ವರದಿಯನ್ನು ಸರ್ಕಾರದ ಮೂಲಕ ಉಚ್ಚ ನ್ಯಾಯಾಲಯಕ್ಕೆ ಸಲ್ಲಿಸಬೇಕಿದ್ದು, ಸಾರ್ವಜನಿಕರು ಅನಧಿಕೃತ ಧಾರ್ಮಿಕ ಕಟ್ಟಡಗಳ ತೆರವು ಕಾರ್ಯಾಚರಣೆಗೆ ಯಾವುದೇ ಕಾರಣಕ್ಕೂ ಪ್ರತಿರೋಧ ವ್ಯಕ್ತಪಡಿಸಬಾರದು ಎಂದು ಜಿಲ್ಲಾಧಿಕಾರಿಗಳು ಮನವಿ ಮಾಡಿದರು.
ಸರ್ಕಾರದ ಆದೇಶದನ್ವಯ ಸಾರ್ವಜನಿಕ ಸ್ಥಳಗಳಲ್ಲಿ 2009ರ ಸೆ. 29ಕ್ಕೂ ಮುಂಚಿತವಾಗಿ ಅನಧಿಕೃತವಾಗಿ ನಿರ್ಮಿಸಿರುವ ಧಾರ್ಮಿಕ ಕಟ್ಟಡಗಳನ್ನು ಆ ಪ್ರದೇಶದ ಪ್ರಶಾಂತತೆಗೆ ಭಂಗವುಂಟು ಮಾಡುವುದಿಲ್ಲವೆಂದು ಖಚಿತಪಟ್ಟಲ್ಲಿ ಅಂತಹ ಕಟ್ಟಡಗಳನ್ನು ಕೆಟಿಸಿಪಿ ಕಾಯ್ದೆ, ಮುನಿಸಿಪಾಲಿಟಿ ಕಾಯ್ದೆ, ಪುರಸಭೆ ಕಾಯ್ದೆ ಮತ್ತು ಇತರೆ ಸ್ಥಳೀಯ ಕಾನೂನು ಕಾಯ್ದೆಗಳಿಗೆ ವ್ಯತಿರಿಕ್ತವಾಗಿಲ್ಲದಿದ್ದಲ್ಲಿ ಅವುಗಳನ್ನು ಉಳಿಸಿಕೊಂಡು ಕಾನೂನು ಕಾಯ್ದೆಗೊಳಪಟ್ಟಂತೆ ಅಧಿಕೃತಗೊಳಿಸಬಹುದಾಗಿರುತ್ತದೆ.
ಇದನ್ನೂ ಓದಿ:ಗ್ರಾಮೀಣ ಭಾಗದಲ್ಲೂ ಕೊರೊನಾ ಅಬ್ಬರ... ಎಚ್ಚರಿಕೆಯಿಂದ ಇರಲು ಚಾಮರಾಜನಗರ ಡಿಸಿ ಮನವಿ
ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತವಾಗಿ ನಿರ್ಮಿಸಲಾಗಿರುವ ಧಾರ್ಮಿಕ ಕಟ್ಟಡಗಳು, ನಿರ್ಮಾಣ ಮಾಡುತ್ತಿರುವ ಕಟ್ಟಡಗಳು ಕಂಡು ಬಂದಲ್ಲಿ ಸಾರ್ವಜನಿಕರು ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ಒದಗಿಸಬಹುದು. ಮಾಹಿತಿ ಒದಗಿಸುವ ಸಾರ್ವಜನಿಕರ ಹೆಸರನ್ನು ಬಹಿರಂಗಪಡಿಸದೆ ರಹಸ್ಯವಾಗಿಡಲಾಗುವುದು ಎಂದರು.