ಕರ್ನಾಟಕ

karnataka

ETV Bharat / state

ದಾವಣಗೆರೆಯಲ್ಲಿ ಧಾರಾಕಾರ ಮಳೆ: ನೆಲಕ್ಕುರುಳಿದ 27 ಮನೆ.. ಜನರ ಜೀವನ ಅಯೋಮಯ

ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಬಿಳಿಚೋಡು ಗ್ರಾಮದಲ್ಲಿರುವ ಜನತಾ ಕಾಲೋನಿಯ ಜನರ ಜೀವನ ಅಯೋಮಯವಾಗಿದೆ.

ದಾವಣಗೆರೆಯಲ್ಲಿ ಧಾರಾಕಾರ ಮಳೆ
ದಾವಣಗೆರೆಯಲ್ಲಿ ಧಾರಾಕಾರ ಮಳೆ

By

Published : Oct 12, 2022, 6:54 PM IST

Updated : Oct 12, 2022, 7:18 PM IST

ದಾವಣಗೆರೆ: ಅದು ಬಡವರಿಗಾಗಿ ತಾಲೂಕು ಆಡಳಿತದಿಂದ ನೀಡಿದ ಜನತಾ ಕಾಲೋನಿ. ಅಲ್ಲಿ ಬಡವರೇ ಹೆಚ್ಚು ಕೂಲಿನಾಲಿ ಮಾಡ್ತಾ ಜೀವನದ ಬಂಡಿ ಸಾಗಿಸುತ್ತಿದ್ದಾರೆ. ಆದರೆ, ನಿರಂತರವಾಗಿ ಮಳೆಯಿಂದಾಗಿ ಈ ಕಾಲೋನಿ ಬಳಿ ಹರಿಯುವ ಹಳ್ಳದ ನೀರು ಇಡೀ ಬಡವರ್ಗದ ಕಾಲೋನಿಯನ್ನೇ ಆವರಿಸಿದ್ದು, ಮನೆಗಳು ನೆಲಸಮವಾಗಿವೆ. ಇತ್ತ ಮನೆಗಳಿಗೆ ನೀರು ನುಗ್ಗಿ ಜನ ತಮ್ಮ ಮನೆಗಳನ್ನು ಬಿಡುವ ಪರಿಸ್ಥಿತಿ ನಿರ್ಮಾಣ ಆಗಿದೆ.

ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಬಿಳಿಚೋಡು ಗ್ರಾಮದಲ್ಲಿರುವ ಜನತಾ ಕಾಲೋನಿಯ ಜನರ ಜೀವನ ಆಯೋಮಯ ಆಗಿದೆ. ಭರಮಸಾಗರ ಕೆರೆ, ಹಿರೇ ಅರಕೆರೆ ಮತ್ತು ಚದ್ರಗೋಳ ಹಳ್ಳದಲ್ಲಿ ಹರಿದು ಬರುತ್ತಿರುವ ಅಪರಾ ಪ್ರಮಾಣದ ನೀರು ಈ ಬಡವರೇ ಹೆಚ್ಚು ವಾಸಿಸುತ್ತಿರುವ ಈ ಜನತಾ ಕಾಲೋನಿಯನ್ನು ಆವರಿಸಿಕೊಂಡಿದೆ. ಸತತ ಎರಡು ದಿ‌ಗಳಿಂದ ಜೀವನಸಾಗಿಸಲು ಮನೆ ಇಲ್ಲದೇ, ಸೇವಿಸಲು ಆಹಾರ ಇಲ್ಲದೆ ಇಲ್ಲಿನ ಬಡ ಕೂಲಿಕಾರ್ಮಿಕರು ಹೈರಾಣಾಗಿದ್ದಾರೆ.

ಧಾರಾಕಾರ ಮಳೆಯಿಂದಾದ ಅನಾಹುತದ ಬಗ್ಗೆ ಸ್ಥಳೀಯರು ಮಾತನಾಡಿದ್ದಾರೆ

ಈ ಜನತಾ ಕಾಲೋನಿಯಲ್ಲಿರುವ ಒಟ್ಟು ಇನ್ನೂರು ಮನೆಗಳ ಪೈಕಿ 40 ಮನೆಗಳಿಗೆ ಮಳೆ ನೀರು ನುಗ್ಗಿದ್ದು, 27 ಮನೆಗಳು ಭಾಗಶಃ ನೆಲಕ್ಕುರುಳಿವೆ. ಮನೆ ಕಳೆದುಕೊಂಡು ಬೀದಿಪಾಲಾಗಿದ್ದವರಿಗೆ ಜಗಳೂರು ತಾಲೂಕು ಆಡಳಿತ ಕಾಳಜಿ ಕೇಂದ್ರವನ್ನು ತೆರೆದು ಒಟ್ಟು 180 ಜನರಿಗೆ ಆರೈಕೆ ಮಾಡಲಾಗ್ತಿದೆ.

ಇನ್ನು ಈ ಚದ್ರಗೋಳ ಹಳ್ಳ ತುಂಬಿ ಭೋರ್ಗರೆಯುತ್ತಿದ್ದರಿಂದ ಈ ಹಳ್ಳದ ಕಿನಾರೆಯಲ್ಲೇ ಈ ಜನತಾ ಕಾಲೋನಿ ಇರುವುದರಿಂದ ಇಷ್ಟೆಲ್ಲ ಅನಾಹುತ ಆಗಲು ಕಾರಣವಾಗಿದೆ. ಈ ರೀತಿ ಪದೆ ಪದೆ ಮಳೆ ಬಂದ್ರೆ ಬಿಳುಚೋಡು ಗ್ರಾಮದ ಜನತಾ ಕಾಲೋನಿಯ ಜನರಿಗೆ ಸಮಸ್ಯೆ ಕಟ್ಟಿಟ್ಟ ಬುತ್ತಿ. ಇದರಿಂದ ಈ ಸಮಸ್ಯೆಗೆ ಇತಿಶ್ರೀ ಹಾಡಲು ಶಾಸಕ ಎಸ್ ವಿ ರಾಮಚಂದ್ರಪ್ಪ ಅಧಿಕಾರಿಗಳಿಗೆ ತಿಳಿಸಿದ್ದಾರೆಂದು ತಹಶೀಲ್ದಾರ್ ಸಂತೋಷ್ ಮಾಹಿತಿ ನೀಡಿದರು.

ನೊಂದವರಿಗೆ ಸೂರು : ಸತತವಾಗಿ ಮೂರ್ನಾಲ್ಕು ದಿನಗಳಿಂದ ಸುರಿದ ಮಳೆಯಿಂದ ಈ ಜನತಾ ಕಾಲೋನಿ ಜನರು ಇಂದಿಗೂ ಆತಂಕದಲ್ಲಿ ಕಾಲ ಕಳೆಯುತ್ತಿದ್ದಾರೆ. ಮೂರು ದಿನಗಳ ಆಹಾರ ನೀರು ಇಲ್ಲದೇ ಜೀವಿಸಲು ಮನೆ ಇಲ್ಲದೆ ಸಾಕಷ್ಟು ತೊಂದರೆ ಅನುಭವಿಸುವಂತಾಗಿತ್ತು. ಇಂದು ಭೇಟಿ ನೀಡಿದ ತಹಶೀಲ್ದಾರ್ ಹಾಗೂ ಅಧಿಕಾರಿಗಳು ಕಾಳಜಿ ಕೇಂದ್ರ ತೊರೆದು ನೊಂದವರಿಗೆ ಸೂರು ಕಲ್ಪಿಸಿದ್ದಾರೆ.

ಮಳೆ ನೀರಿನಲ್ಲೇ ಜೀವನ ಸಾಗಣೆ: ಮಳೆ ಬಂದ್ರೆ ಈ ರೀತಿಯೇ ಸಮಸ್ಯೆ ಆಗ್ತಿದೆ. ಆದ್ದರಿಂದ ಇಲ್ಲಿರುವ ಮನೆ ನಮಗೆ ಬೇಡ ಸ್ವಾಮಿ, ಬೇರೆ ಕಡೆ ಎಲ್ಲಿಯಾದರೂ ನಮಗೆ ಸೂರು ಕಲ್ಪಿಸಿ ಸ್ವಾಮಿ, ದಿನ ಬೆಳಗಾದರೆ ಮಳೆ ನೀರಿನಲ್ಲೇ ಜೀವನ ಸಾಗಿಸುತ್ತಿದ್ದೇವೆ. ಇಲ್ಲಿ ಇದ್ರೇ ನಮ್ಮ ಜೀವಕ್ಕೆ ಅಪಾಯ ಸ್ವಾಮಿ ಎಂದು ತೊಂದರೆಗೊಳಗಾದ ಅನುಸೂಯಮ್ಮನವರು ಪರಿಪರಿಯಾಗಿ ಬೇಡಿಕೊಂಡರು.

ಜನ ಜೀವನ ಅಯೋಮಯ: ಒಟ್ಟಾರೆ ಈ ಜನತಾ ಕಾಲೋನಿಯ ಜನ ಜೀವನ ಅಯೋಮಯವಾಗಿದೆ. ಹಳ್ಳದ ಕಿನಾರೆಯಲ್ಲೇ ತಮ್ಮ ಜೀವ ಅಂಗೈಯಲ್ಲಿಟ್ಟುಕೊಂಡು ಜೀವನ ಸಾಗಿಸುತ್ತಿದ್ದಾರೆ. ಸಾಕಷ್ಟು ಬಾರಿ ಜನತಾ ಕಾಲೋನಿಯಿಂದ ಬೇರೆಡೆ ಸೂರು ಕಲ್ಪಿಸಿ‌ ಎಂದು ಪರಿಪರಿಯಾಗಿ ಬೇಡಿಕೊಂಡರೂ ಕೂಡ ಅಧಿಕಾರಿಗಳು ಮಾತ್ರ ಈ ಬಡ ಜನರ ಮಾತಿಗೆ ಸೊಪ್ಪು ಹಾಕದೇ ಇರುವುದು ಆಕ್ರೋಶಕ್ಕೆ ಕಾರಣವಾಗಿದೆ.

ಓದಿ:ರಾಜ್ಯದಲ್ಲಿ 41.8 ಸಾವಿರ ಹೆಕ್ಟೇರ್ ಭೂಮಿ ಸವಳು ಜವಳು: ಮಣ್ಣಿನ ಆರೈಕೆಗೆ ಮುಂದಾದ ಕೃಷಿ ಇಲಾಖೆ

Last Updated : Oct 12, 2022, 7:18 PM IST

ABOUT THE AUTHOR

...view details