ದಾವಣಗೆರೆ:ಅವರು ಅಲ್ಲಿ ಗುಡಿಸಲು ಹಾಕಿಕೊಂಡು 30 ವರ್ಷಗಳಿಂದ ಜೀವನ ಸಾಗಿಸುತ್ತ ಬದುಕು ಕಟ್ಟಿಕೊಂಡವರು. ಬಡವರ ಪಡಿಪಾಟಲು ನೋಡಲಾರದೆ ಮಾಜಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಅವರು 37 ನಿವೇಶನಗಳನ್ನು ಹಕ್ಕು ಪತ್ರ ಸಮೇತ ನೀಡಿದ್ರು. ಆದ್ರೇ ಇವರಿಗೆ ಪಾಲಿಕೆ ಮೂಲ ಸೌಲಭ್ಯಗಳನ್ನು ನೀಡುವಲ್ಲಿ ಎಡವಿದೆ. ಹೇಳಿ ಕೇಳಿ ಇದು ಪಾಲಿಕೆ ವ್ಯಾಪ್ತಿಗೆ ಬರುತ್ತಿದ್ದು, ಈ ವಾರ್ಡ್ ಪಾಲಿಕೆ ಮೇಯರ್ ಅವರ ವಾರ್ಡ್ ಕೂಡ ಹೌದು. ದುರಂತ ಅಂದ್ರೆ ಇಲ್ಲಿ ಮನೆಗಳು ಶೀಟ್ಮಯ, ಚರಂಡಿ ಮೇಲೆ ಸ್ನಾನ, ಬಯಲೇ ಶೌಚಾಲಯ, ದನವಿನ ಓಣಿಯ ಜನರ ಜೀವನ ಅಯೋಮಯ ಎಂಬಂತಿದೆ.
ದಾವಣಗೆರೆ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ 31ನೇ ವಾರ್ಡ್ನ ದನವಿನ ಓಣಿ (ಎಸ್. ಎಸ್ ಮಲ್ಲಿಕಾರ್ಜುನ್ ನಗರ) ಯಲ್ಲಿ ಮೇಯರ್ ವಾರ್ಡ್‌ನಲ್ಲಿಯೇ ಮೂವತ್ತಕ್ಕೂ ಹೆಚ್ಚು ಕುಟುಂಬಗಳು ಗುಡಿಸಲುಗಳಿಂದ ರೂಪಾಂತರಗೊಂಡಿರುವ ತಗಡಿನ ಶೆಡ್ಗಳಲ್ಲಿ ವಾಸವಾಗಿವೆ. ಈ ವಾರ್ಡ್ ಬೇರೆಯಾರದ್ದು ಅಲ್ಲ, ಸ್ವತಃ ಪಾಲಿಕೆಯ ಮೇಯರ್ ಜಯಮ್ಮ ಗೋಪಿನಾಯ್ಕ ಅವರ 31ನೇ ವಾರ್ಡ್ ಕೂಡ ಹೌದು.
ಇಲ್ಲಿ 37 ಕುಟುಂಬಗಳು ನೆಲೆಸಿದ್ದು, ಇವರನ್ನು ಗುರುತಿಸಿದ ಅಂದಿನ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ನಿವೇಶನಗಳನ್ನು ನೀಡಿದ್ದರು. ಈ ಪೈಕಿ ಮೂರು ಕುಟುಂಬಗಳು ಸುಸಜ್ಜಿತ ಮನೆ ನಿರ್ಮಿಸಿಕೊಂಡು ವಾಸವಾಗಿದ್ದಾರೆ. ಇನ್ನುಳಿದ 30ಕ್ಕೂ ಹೆಚ್ಚು ಕುಟುಂಬಗಳು ಗೋಡೆಯಂತೆ ತಗಡಿನ ಶೀಟ್ ನಿಲ್ಲಿಸಿ, ಛಾವಣಿಯನ್ನು ತಗಡಿನ ಶೀಟ್‌ಗಳಿಂದ ಮುಚ್ಚಿ ಜೀವನದ ಬಂಡಿ ಸಾಗಿಸುತ್ತಿದ್ದಾರೆ.
ಈ ಭಾಗದಲ್ಲಿ ಹಮಾಲಿ, ಮನೆಗೆಲಸ ಸೇರಿ ಇತರೆ ಕೂಲಿ ಮಾಡಿಕೊಂಡು ಜೀವನ ಸಾಗಿಸುತ್ತಿರುವ ಜನರೇ ಹೆಚ್ಚಾಗಿ ವಾಸವಾಗಿದ್ದಾರೆ. ಜೋರಾಗಿ ಗಾಳಿ ಬಂದರೆ ಇಡೀ ಶೆಡ್ ಹಾರಿ ಹೋಗುವ ಆತಂಕದಲ್ಲೇ ದಿನ ಕಳೆಯುತ್ತಿದ್ದಾರೆ. ಇನ್ನು, ಇಲ್ಲಿನ ಜನರು ಮೂಲ ಸೌಕರ್ಯಗಳಿಂದ ಸಂಪೂರ್ಣವಾಗಿ ವಂಚಿತರಾಗಿದ್ದು, ಮೇಯರ್ ಜಯಮ್ಮ ಗೋಪಿನಾಯ್ಕ್ ಅವರ ವಾರ್ಡ್ ಆಗಿದ್ದರೂ ಕೂಡ ಮೇಯರ್ ಮೇಡಂ ಮಾತ್ರ ಇತ್ತ ತಲೆ ಹಾಕಿ ಮಲಗಿಲ್ಲವಂತೆ ಎಂದು ಕಾರ್ಮಿಕ ಹೋರಾಟಗಾರ ಮುಖಂಡ ವಾಸು ಆಗ್ರಹಿಸಿದರು.
ಬಯಲೇ ಶೌಚಾಲಯ, ಚರಂಡಿ ಮೇಲೆ ಸ್ನಾನ..ದಾವಣಗೆರೆ ನಗರ ಶೌಚಾಲಯ ಮುಕ್ತವಾಗಿದೆ ಎಂದು ದಾವಣಗೆರೆ ಮಹಾನಗರವು ಬಯಲು ಶೌಚಾಲಯದಿಂದ ಮುಕ್ತಿ ಪಡೆದಿದೆ ಎಂಬುದಾಗಿ ದಾಖಲೆಗಳಲ್ಲಿ ಹೇಳಲಾಗುತ್ತಿದೆ ಅಷ್ಟೆ. ಆದರೆ, ವಾಸ್ತವ ಚಿತ್ರಣವೇ ಬೇರೆ ಇದೆ. ಪಾಲಿಕೆ ಮೇಯರ್ ಜಯಮ್ಮ ಗೋಪಿ ನಾಯ್ಕ ಅವರ ವಾಡ್‌೯ನ ದನವಿನ ಓಣಿ, ಹಳೇ ಚಿಕ್ಕನಹಳ್ಳಿ, ಗೋಶಾಲೆಯ ಒಂದು ಭಾಗದಲ್ಲಿ ಯುಜಿಡಿ ವ್ಯವಸ್ಥೆ ಇಲ್ಲದ ಕಾರಣ ವೈಯಕ್ತಿಕ ಶೌಚಾಲಯ ಹೊಂದಿಲ್ಲ. ಆದ್ದರಿಂದ ಇಲ್ಲಿಯ ನಿವಾಸಿಗಳಿಗೆ ಬಯಲು ಶೌಚಾಲಯವೇ ಗತಿಯಾಗಿದೆ.