ದಾವಣಗೆರೆ:ಹಿರಿಯ ಪೇಜಾವರ ಶ್ರೀಯವರ ಕಾಲದಲ್ಲಿ ಆಚರಣೆಯಲ್ಲಿದ್ದ ಕೆಳವರ್ಗದವರ ಮನೆಗಳಲ್ಲಿ ಪಾದಪೂಜೆ ಸ್ವೀಕರಿಸುವ ಆಚರಣೆಯನ್ನು ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಮುಂದುವರೆಸಿದ್ದಾರೆ. ಇಲ್ಲಿನ ಜಯನಗರದ ನಿವಾಸಿ ಹಾಗು ದಲಿತ ಸಮುದಾಯದ ಮುಖಂಡ ಆಲೂರು ನಿಂಗರಾಜ್ ನಿವಾಸದಲ್ಲಿ ಶ್ರೀಗಳು ಪಾದಪೂಜೆ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಪೇಜಾವರ ಶ್ರೀಗಳೊಂದಿಗೆ ಆದಿಜಾಂಬವ ಮಠದ ಷಡಕ್ಷರಮುನಿ ಸ್ವಾಮೀಜಿ ಉಪಸ್ಥಿತರಿದ್ದರು.
ಬಳಿಕ ಮಾತನಾಡಿದ ಶ್ರೀಗಳು, ಅಯೋಧ್ಯೆಯಲ್ಲಿ ಶ್ರೀರಾಮನ ಮಂದಿರ ನಿರ್ಮಾಣವಾಗುತ್ತಿದೆ. ಆದರೆ ರಾಮರಾಜ್ಯ ಆಗಬೇಕಾಗಿರುವುದು ಒಂದು ಬಾಕಿ ಇದೆ ಎಂದರು. ಮಂದಿರ ನಿರ್ಮಾಣಕ್ಕಾಗಿ ನಾವು ತಲೆತಲಾಂತರಗಳಿಂದ ಶ್ರಮಿಸಿದ್ದೇವೆ. ಇದೀಗ ಕನಸು ನನಸಾಗುವ ಸಂದರ್ಭ ಬಂದಿದೆ. ಇನ್ನೊಂದು ವರ್ಷ ಅಂದರೆ, 2024ರ ಜನವರಿ ವೇಳೆಗೆ ಶ್ರೀರಾಮನ ಭವ್ಯ ಮಂದಿರದಲ್ಲಿ ರಾಮನ ಪ್ರಾಣ ಪ್ರತಿಷ್ಠೆ ಆಗಲಿದೆ ಎಂದರು.