ದಾವಣಗೆರೆ: ಮಧ್ಯ ಕರ್ನಾಟಕದ ದಾವಣಗೆರೆಯಲ್ಲಿ ಫೆಬ್ರವರಿ ತಿಂಗಳಲ್ಲಿ ಪಂಚಮಸಾಲಿ ಲಿಂಗಾಯತ ಸಮುದಾಯದ ಸಮಾವೇಶ ಮಾಡುತ್ತೇವೆ. ಅಷ್ಟರೊಳಗೆ ಸರ್ಕಾರ ಕೊಟ್ಟ ಮಾತಿನಂತೆ ಪಂಚಮಸಾಲಿ ಲಿಂಗಾಯತ ಸಮುದಾಯ 2ಎ ಸೇರ್ಪಡೆ ಕುರಿತು ನಿರ್ಧಾರ ತೆಗೆದುಕೊಳ್ಳಬೇಕು ಎಂದು ಕೂಡಲ ಸಂಗಮ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ನಗರದಲ್ಲಿ ಶನಿವಾರ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಪಂಚಮಸಾಲಿ ಸಮಾಜವನ್ನು 2ಎ ಸೇರ್ಪಡೆ ಮಾಡುವ ಕುರಿತು ರಾಜ್ಯ ಸರ್ಕಾರ ಮಾತು ಕೊಟ್ಟಿತ್ತು. ಅದ್ರೆ ಇದರ ಬಗ್ಗೆ ಸರ್ಕಾರದ ಮಟ್ಟದಲ್ಲಿ ಇದುವರೆಗೂ ಚರ್ಚೆ ಆಗಿಲ್ಲ. ಸರ್ಕಾರ ಕೂಡಲೇ ಪಂಚಮಸಾಲಿ ಸಮುದಾಯಕ್ಕೆ ನ್ಯಾಯ ಒದಗಿಸುವ ಕೆಲಸ ಮಾಡಬೇಕಾಗಿದೆ. ಇಲ್ಲವಾದರೆ ಮತ್ತೆ ನಾವು ಸರ್ಕಾರದ ವಿರುದ್ಧ ಬೀದಿಗಿಳಿದು ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಶ್ರೀಗಳು ಸರ್ಕಾರಕ್ಕೆ ಹೋರಾಟದ ಎಚ್ಚರಿಕೆ ರವಾನಿಸಿದ್ದಾರೆ.
ಇನ್ನು ಸಮಾವೇಶದ ಸಂಬಂಧ ಜನವರಿ 15 ರಂದು ಕೂಡಲ ಸಂಗಮ ಮಠದಲ್ಲಿ ಸಮುದಾಯದ ಸಭೆ ಕರೆದಿದ್ದೇವೆ. ಫೆಬ್ರವರಿ ತಿಂಗಳಲ್ಲಿ ಮಧ್ಯಕರ್ನಾಟಕ ದಾವಣಗೆರೆಯಲ್ಲಿ ಮತ್ತೆ ಸಮುದಾಯದ ಸಮಾವೇಶ ಮಾಡುತ್ತೇವೆ. ಅಷ್ಟರೊಳಗೆ ರಾಜ್ಯ ಸರ್ಕಾರ ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕು ಎಂಬ ಒತ್ತಾಯಿಸಿದರು.
ಅಧಿವೇಶನದ ಬಗ್ಗೆ ಶ್ರೀಗಳು ಹೇಳಿದ್ದಿಷ್ಟು;ಇತ್ತೀಚೆಗೆ ನಗರದಲ್ಲಿ ನಡೆದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ 24ನೇ ಅಧಿವೇಶನದಲ್ಲಿ ತೆಗೆದುಕೊಂಡ ಹಲವು ನಿರ್ಣಯಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, ತೆಗೆದುಕೊಂಡಿರುವ ಕೆಲವು ನಿರ್ಣಯಗಳನ್ನು ಒಕ್ಕೋರಲಿನಿಂದ ನಾವು ಸ್ವಾಗತ ಮಾಡುತ್ತೇವೆ. ಅದರೆ ಜಾತಿ ಗಣತಿಯಲ್ಲಿ ಉಪಜಾತಿಗಳ ಹೆಸರು ಬರೆಸುವ ಬದಲು ವೀರಶೈವ ಲಿಂಗಾಯತ ಎಂದು ಬರೆಸಬೇಕೆಂಬುದು ಸಮುದಾಯದ ಜನರಲ್ಲಿ ಗೊಂದಲ ಉಂಟು ಮಾಡುತ್ತಿದೆ.
ಲಿಂಗಾಯತರ ಕೆಲ ಉಪಜಾತಿಗಳು 2ಎ ಗೆ ಸೇರಿದ್ದು, ನಾವು ಕೂಡ 2ಎ ಮೀಸಲಾತಿ ಪಡೆಯುವ ಉದ್ದೇಶ ಇದೆ. ಇದಲ್ಲದೇ ಕೆಲವೇ ದಿನಗಳಲ್ಲಿ ಲಿಂಗಾಯತ ಸಮುದಾಯದ ಎಲ್ಲ ಉಪಪಂಗಡಗಳ ರಾಜ್ಯಾಧ್ಯಕ್ಷರ ಸಭೆ ಕರೆಯುತ್ತೇವೆ. ಲಿಂಗಾಯತ ಎಲ್ಲ ಒಳಪಂಗಡಗಳನ್ನು ಕೇಂದ್ರದ ಒಬಿಸಿ ಪಟ್ಟಿಗೆ ಸೇರಿಸುವ ಬಗ್ಗೆ ಚರ್ಚೆ ಮಾಡುತ್ತೇವೆ ಎಂದರು.