ದಾವಣಗೆರೆ: ಜಿಲ್ಲೆಯ ಜೀವನಾಡಿಯಾದ ಕುಂದುವಾಡ ಕೆರೆಯ ಅಭಿವೃದ್ದಿ ಕಾಮಗಾರಿಯನ್ನು ಜಿಲ್ಲಾಡಳಿತ ಕೈಗೆತ್ತುಕೊಂಡಿದೆ. ಸ್ಮಾರ್ಟ್ ಸಿಟಿ ಯೋಜನೆಯಡಿ ಹತ್ತಾರು ಕೋಟಿ ವೆಚ್ಚದಲ್ಲಿ ಕೆರೆ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ಇದನ್ನು ವಿರೋಧಿಸಿ ಪರಿಸರ ಪ್ರೇಮಿಗಳು ಹೋರಾಟಕ್ಕೆ ಇಳಿದಿದ್ದಾರೆ. ಇದಕ್ಕೆ ನ್ಯಾಯಾಲಯದಲ್ಲಿ ಜಯವೂ ಸಿಕ್ಕಿದೆ.
ಕೆರೆಯ ಏರಿಯಲ್ಲಿ ನಾಲ್ಕು ಕೋಟಿ ವೆಚ್ಚದಲ್ಲಿ ಸೈಕಲ್ ಪಾಥ್ ನಿರ್ಮಾಣ ಮಾಡಲು ಸ್ಮಾರ್ಟ್ ಸಿಟಿ ಅಧಿಕಾರಿಗಳು ಮುಂದಾಗಿದ್ದರು. ಇದನ್ನು ಯುವ ಭಾರತ್ ಗ್ರೀನ್ ಬ್ರಿಗೇಡ್ ವಿರೋಧಿಸಿದೆ. ನೈಸರ್ಗಿಕವಾದ ಕೆರೆಯಲ್ಲಿ ಸೈಕಲ್ ಪಾಥ್ ನಿರ್ಮಾಣ ಮಾಡುವುದು ಸರಿಯಲ್ಲ. ನಗರದ ಹಲವು ಕಡೆ ಸಾಕಷ್ಟು ಜಾಗಗಳು ಇವೆ. ಅಲ್ಲಿ ಸೈಕಲ್ ಪಾಥ್ ನಿರ್ಮಾಣ ಮಾಡಿ ಎಂದು ಜಿಲ್ಲಾಡಳಿತ, ಸ್ಮಾರ್ಟ್ ಸಿಟಿ ಹಾಗೂ ಪಾಲಿಕೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಆದರೂ ಕೂಡ ಮನವಿಯನ್ನು ನಿರ್ಲಕ್ಷಿಸಿ ಅಧಿಕಾರಿಗಳು ಕಾಮಗಾರಿಯನ್ನು ಮುಂದುವರೆಸಿದ್ದರು.
ಇದಕ್ಕೆ ಹೈಕೋರ್ಟ್ನಲ್ಲಿ ಯುವ ಭಾರತ್ ಗ್ರೀನ್ ಬ್ರಿಗೇಡ್ 2020ರ ಮಾರ್ಚ್ 20 ರಂದು ಅರ್ಜಿ ಸಲ್ಲಿಕೆ ಮಾಡಿತ್ತು. ಮಾರ್ಚ್ 24 ಕ್ಕೆ ಹೈಕೋರ್ಟ್ ತಡೆಯಾಜ್ಞೆ ಯನ್ನು ನೀಡಿತ್ತು. ಸ್ಮಾರ್ಟ್ ಸಿಟಿ ಅಧಿಕಾರಿಗಳು ಹಾಗೂ ಮಹಾನಗರ ಪಾಲಿಕೆ ಇದು ವಾಟರ್ ಟ್ಯಾಂಕ್ ಮಾತ್ರ, ಕುಂದುವಾಡ ಕೆರೆ ನೈಸರ್ಗಿಕವಾಗಿರುವ ಕೆರೆ ಅಲ್ಲ ಎಂದು ನ್ಯಾಯಾಲಯದ ಮುಂದೆ ವರದಿ ಸಲ್ಲಿಕೆ ಮಾಡಿತ್ತು. ಆದರೆ, ನ್ಯಾಯಾಲಯ ವಿಚಾರಣೆ ನಡೆಸಿ ಅದು ನೈಸರ್ಗಿಕವಾದ ಕೆರೆ, ಕೂಡಲೇ ಸೈಕಲ್ ಪಾಥ್ ಮಾಡದಿರುವಂತೆ ಸ್ಮಾರ್ಟ್ ಸಿಟಿ ಅಧಿಕಾರಿಗಳಿಗೆ ಸೂಚನೆ ನೀಡಿದೆ.