ದಾವಣಗೆರೆ :ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಡಿಸೆಂಬರ್ 9ರ ನಂತರ ಸಿಹಿ ಹಂಚುತ್ತೇವೆ ಎಂದಿದ್ದಾರೆ. ಆದ್ರೆ, ಸಿದ್ದರಾಮಯ್ಯ ಅವರನ್ನು ವಿಪಕ್ಷ ಸ್ಥಾನದಿಂದ ಕೆಳಗಿಳಿಸೋದೇ ಖರ್ಗೆ ಕೊಡುವ ಸಿಹಿಸುದ್ದಿ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ವಂಗ್ಯವಾಡಿದ್ದಾರೆ.
ಸಿದ್ದರಾಮಯ್ಯರವರನ್ನು ವಿಪಕ್ಷ ಸ್ಥಾನದಿಂದ ಕೆಳಗಿಳಿಸುವುದೇ ಖರ್ಗೆ ಕೊಡುವ ಸಿಹಿ ಸುದ್ದಿ : ಎಂ.ಪಿ ರೇಣುಕಾಚಾರ್ಯ ನಗರದ ರೇಣುಕಾ ಮಂದಿರದಲ್ಲಿ ನಡೆದ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಗೆದ್ದ ಹಾಗೂ ಸೋತ ಬಿಜೆಪಿ ಅಭ್ಯರ್ಥಿಗಳ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಾಂಗ್ರೆಸ್ನಲ್ಲಿ ಮೂಲ ಕಾಂಗ್ರೆಸ್ಸಿಗರೆಲ್ಲಾ ಒಂದಾಗಿ ಸಿದ್ದರಾಮಯ್ಯರನ್ನು ವಿಪಕ್ಷ ಸ್ಥಾನದಿಂದ ಕೆಳಗಿಳಿಸಲು ಸಂಚು ರೂಪಿಸಿದ್ದಾರೆ. ಮೂರೂವರೆ ವರ್ಷ ಯಡಿಯೂರಪ್ಪನವರೇ ಸಿಎಂ ಆಗಿರಲಿದ್ದು, ಯಾರೂ ಏನೂ ಮಾಡಲಾಗದು ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ಕುಟುಂಬ ರಾಜಕಾರಣ ಕೊನೆಗಾಣಿಸಬೇಕಿದೆ. ನಗರದಲ್ಲಿ ಎಲ್ಲೆಲ್ಲಿ ಜಾಗವಿತ್ತೋ ಅದನ್ನೆಲ್ಲಾ ಒಂದು ಕುಟುಂಬ ನುಂಗುತ್ತಿತ್ತು. ಇದಕ್ಕೆ ಬೇಸತ್ತ ಜನ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕಿ 17 ಸ್ಥಾನಗಳಲ್ಲಿ ಗೆಲ್ಲಿಸಿದ್ದಾರೆ. ಕಳೆದ ಬಾರಿ ಒಂದು ಸ್ಥಾನದಲ್ಲಿ ಮಾತ್ರ ಬಿಜೆಪಿ ಗೆದ್ದಿತ್ತು. ಈ ಬಾರಿ ನಾವೇ ಪಾಲಿಕೆಯಲ್ಲಿ ಅಧಿಕಾರದ ಗದ್ದುಗೆ ಹಿಡಿಯುತ್ತೇವೆ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ಸ್ಪಷ್ಟನೆ ನೀಡಿದರು.
ಇನ್ನೂ ಪಕ್ಷದ ಕಾರ್ಯಕರ್ತರು, ಮುಖಂಡರನ್ನು ಯಾರೂ ಮರೆಯಬಾರದು. ಅವರ ಪರಿಶ್ರಮದ ಫಲದಿಂದ ನಾವು ಅಧಿಕಾರಕ್ಕೇರಿದ್ದೇವೆ. ಕಾರ್ಯಕರ್ತರನ್ನು ಮರೆತರೆ ನಾವು ಅಧಿಕಾರಕ್ಕೇರಲು ಆಗದು. ಹಾಗಾಗಿ ನೂತನವಾಗಿ ಜಯಗಳಿಸಿರುವ ಅಭ್ಯರ್ಥಿಗಳು, ಪಕ್ಷದ ಕಾರ್ಯಕರ್ತರು ಹಾಗೂ ಜನರ ಕೆಲಸವನ್ನು ಮಾಡಿಕೊಡಿ, ನಿರ್ಲಕ್ಷ್ಯವಹಿಸಬೇಡಿ ಎಂದು ಕಿವಿಮಾತು ಹೇಳಿದರು.