ದಾವಣಗೆರೆ : ಇಡೀ ದೇಶದಲ್ಲಿ ನಾನು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಬಡ್ತಿ ಮೀಸಲಾತಿ ನೀಡುವ ಕಾನೂನು ಮಾಡಿದ್ದು ನಮ್ಮ ಸರ್ಕಾರ. ಆದರೆ ಮೀಸಲಾತಿ ಘೋಷಣೆ ಮಾಡಿದ್ದು ಸಿಎಂ ಬಸವರಾಜ್ ಬೊಮ್ಮಾಯಿಯವರ ಸರ್ಕಾರ ಎಂದು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಟಾಂಗ್ ನೀಡಿದ್ದಾರೆ.
ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿ ವಾಲ್ಮೀಕಿ ಮಠದಲ್ಲಿ ಮಾತನಾಡಿದ ಅವರು, ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿಯನ್ನು ಪರಿಶಿಷ್ಟ ಜಾತಿಗೆ 15 ರಿಂದ 17 ಹಾಗೂ ಪರಿಶಿಷ್ಟ ಪಂಗಡ 03 ರಿಂದ 07 ಕ್ಕೆ ಬಡ್ತಿ ನೀಡಲು, ಸಮ್ಮಿಶ್ರ ಸರ್ಕಾರದಲ್ಲಿ ಪ್ರಿಯಾಂಕ ಖರ್ಗೆ ಸಮಾಜ ಕಲ್ಯಾಣ ಸಚಿವರಿದ್ದಾಗ ಆಯೋಗವನ್ನು ರಚನೆ ಮಾಡಿದ್ದು ನಮ್ಮ ಸಮ್ಮಿಶ್ರ ಸರ್ಕಾರ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ನಾವು ಆಯೋಗ ರಚನೆ ಮಾಡಿ ಹೋದ ಬಳಿಕ ವರದಿ ಬಂದಿದೆ. ಅಷ್ಟಕ್ಕೂ ವರದಿ ಕೊಟ್ಟು ಎರಡು ವರ್ಷ ಆದ್ರೂ ಜಾರಿಯಾಗಲಿಲ್ಲ. ನಾಗಮೋಹನ್ ದಾಸ್ ವರದಿಯಲ್ಲಿ ಪರಿಶಿಷ್ಟ ಪಂಗಡದವರಿಗೆ ಮೀಸಲಾತಿಯನ್ನು ಶೇ 03 ರಿಂದ 07 ಕ್ಕೆ ಹಾಗೂ ಪ ಜಾತಿಗೆ ಶೇ 15 ರಿಂದ 1 ಮೀಸಲಾತಿ ಹೆಚ್ಚಳ ಮಾಡ್ಬೇಕೆಂದು ಶಿಫಾರಸು ಮಾಡಿದ್ರು. ಎರಡು ಸಮುದಾಯಕ್ಕೆ ಒಟ್ಟು ಶೇ 24 ರಷ್ಟು ಮೀಸಲಾತಿ ಕೊಡ್ಬೇಕೆಂದು ಎರಡು ವರ್ಷದ ಹಿಂದೆಯೇ ನಾಗಮೋಹನ್ ದಾಸ್ ವರದಿ ನೀಡಿದ್ದರೂ, ಆ ವರದಿ ಅನ್ವಯ ಮೀಸಲಾತಿ ಹೆಚ್ಚಳವಾಗಿರಲಿಲ್ಲ. ಇದರ ವಿರುದ್ಧ ಕಾಂಗ್ರೆಸ್ ಶಾಸಕರು ವಿಧಾನಸಭೆಯಲ್ಲಿ ಸಾಕಷ್ಟು ಹೋರಾಟ ಮಾಡಿದ್ದೆವು. ಬಿಜೆಪಿ ಸರ್ಕಾರ ಜಪ್ಪಯ್ಯ ಎನ್ನಲಿಲ್ಲ. ಆದರೆ, ಪ್ರಸನ್ನಾನಂದ ಪುರಿ ಶ್ರೀಯವರ ಹೋರಾಟ ನಡೆಸಿದ ಬಳಿಕ ಸರ್ಕಾರ ತಲೆಬಾಗಿತು ಎಂದರು.
ಸಂವಿಧಾನ ತಿದ್ದುಪಡಿ ಮಾಡಿ 9th ಶೆಡ್ಯೂಲ್ಗೆ ಸೇರಿಸಿ :ನಾನು ಸರ್ವಪಕ್ಷ ಸಭೆಯಲ್ಲಿ ಘೋಷಣೆಯಾದ ಮೀಸಲಾತಿ 09 ರ ಶೆಡ್ಯೂಲ್ಗೆ ಸೇರಿಸಿ ಸಂವಿಧಾನ ತಿದ್ದುಪಡಿ ಮಾಡಿ ಎಂದು ಹೇಳಿದ್ದೆ. ಆದರೆ, ಸರ್ಕಾರ ಮೂಗಿಗೆ ತುಪ್ಪ ಹಚ್ಚುವ ಬದಲು ಹಣೆಗೆ ತುಪ್ಪ ಹಚ್ಚಿದೆ ಎಂದು ವಾಗ್ದಾಳಿ ನಡೆಸಿದರು. ದೆಹಲಿಯಲ್ಲಿ ಪಾರ್ಲಿಮೆಂಟ್ ನಡೆಯುತ್ತಿದೆ. ಇದು ಸೂಕ್ತ ಸಮಯ. ಸಂವಿಧಾನ ತಿದ್ದುಪಡಿ ಮಾಡಿ 9 ಶೆಡ್ಯೂಲ್ಗೆ ಸೇರಿಸಿದರೆ ಮಾತ್ರ ಮೀಸಲಾತಿ ಕಾರ್ಯಗತಕ್ಕೆ ಬರುತ್ತದೆ. ಇದಕ್ಕೆ ವಿಧಾನಸಭೆ ಅಸೆಂಬ್ಲಿಯಲ್ಲಿ ಒತ್ತಾಯ ಮಾಡುವೆ ಎಂದರು. ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದವರಿಗೆ ಮೀಸಲಾತಿ ನೀಡಬೇಕೆಂಬುದು ಆರ್ಟಿಕಲ್ 15 ಹಾಗೂ 16 ರಲ್ಲಿ ಇದೆ. ಘೋಷಣೆಯಾದ ಮೀಸಲಾತಿ ಸಫಲ ಆಗ್ಬೇಕಾದರೆ ಸಂವಿಧಾನ ತಿದ್ದುಪಡಿ ಹಾಗೂ ಶೆಡ್ಯೂಲ್ 09 ಕ್ಕೆ ಸೇರಲೇಬೇಕು ಎಂದು ಇದೇ ವೇಳೆ ಸಿದ್ದರಾಮಯ್ಯ ಒತ್ತಾಯಿಸಿದರು.