ದಾವಣಗೆರೆ: ದೀಪಾವಳಿ ಬೆಳಕಿನ ಹಬ್ಬ. ಆದರೆ, ಈ ಬೆಳಕಿನ ಹಬ್ಬದಲ್ಲಿ ಸಾಕಷ್ಟು ಜನ ಪಟಾಕಿ ಹೊಡೆಯುವ ಸಾಹಸಕ್ಕೆ ಕೈ ಹಾಕಿ ತಮ್ಮ ಬದುಕು ಕತ್ತಲಾಗಿಸಿಕೊಂಡಿದ್ದಾರೆ. ಪಟಾಕಿ ಸಿಡಿದರೆ ಕಣ್ಣಿಗಾಗುವ ಹಾನಿ ಹಾಗೂ ಪಟಾಕಿ ಹೊಡೆಯುವ ಮುನ್ನ ಮುಖ್ಯವಾಗಿ ಮಕ್ಕಳು ಯುವಕರು ಮುಂಜಾಗ್ರತಾ ಕ್ರಮಗಳನ್ನು ವಹಿಸಬೇಕು. ಯಾವ ರೀತಿ ಮುಂಜಾಗ್ರತೆ ವಹಿಸಬೇಕು ಎಂದು ನೇತ್ರತಜ್ಞ ರವೀಂದ್ರನಾಥ್ ಮಾಹಿತಿ ಕೊಟ್ಟಿದ್ದಾರೆ.
ದೀಪಗಳ ಹಬ್ಬ ದೀಪಾವಳಿ. ಬೆಳಕಿನ ಹಬ್ಬದಲ್ಲಿ ಪಟಾಕಿ ಹೊಡೆದು ಸಂಭ್ರಮಿಸುವುದು ಯಾವ ಹಬ್ಬಗಳಲ್ಲೂ ಇಲ್ಲದ ವಿಶೇಷತೆ ಈ ಹಬ್ಬದಲ್ಲಿದೆ. ಹಬ್ಬದಲ್ಲಿ ಸಿಡಿಸುವ ಪಟಾಕಿಗಳು ಕ್ಷಣ ಮಾತ್ರ ಖುಷಿ ಕೊಡುತ್ತದೆ. ಆದರೆ, ಏನಾದರೂ ಹೆಚ್ಚು ಕಡಿಮೆ ಆದರೆ, ತಮ್ಮ ಬದುಕೇ ಕತ್ತಲಾಗುವ ಸಂಭವ ಹೆಚ್ಚಿದೆ. ಇನ್ನು ಈ ಪಟಾಕಿ ಬಳಕೆ ಮಾಡುವುದರಿಂದ ವಾಯುಮಾಲಿನ್ಯ, ಶಬ್ದ ಮಾಲಿನ್ಯ ಕಟ್ಟಿಟ್ಟ ಬುತ್ತಿ. ಸರ್ಕಾರ ಈ ಪಟಾಕಿಗಳನ್ನು ಬಳಕೆ ಮಾಡಬೇಡಿ ಎಂದು ಹೇಳಿಸಿದರೂ ಜನ ಮಾತ್ರ ಪರಿಸರ ಹಾನಿ ಮಾಡುವ ಪಟಾಕಿ ಹೊಡೆದು ಸಂಭ್ರಮಿಸುವುದು ಮಾತ್ರ ಕಡಿಮೆಯಾಗಿಲ್ಲ.
ನೇತ್ರ ತಜ್ಞ ಡಾ. ರವೀಂದ್ರನಾಥ್ ಮಾತು: ಪಟಾಕಿಗಳು ಸಿಡಿಸುವುದರಿಂದ ಆ ಕ್ಷಣಕ್ಕೆ ಮಾತ್ರ ಖುಷಿ ಸಿಗುತ್ತದೆ. ಪಟಾಕಿಯಿಂದ ವಾಯುಮಾಲಿನ್ಯ, ಶಬ್ದ ಮಾಲಿನ್ಯ, ಅದರಲ್ಲೂ ಪಟಾಕಿಯಿಂದ ಕಣ್ಣಿಗೆ ಹಾನಿ. ಕಳೆದ ನಾಲ್ಕೈದು ವರ್ಷಗಳಿಗೆ ಹೋಲಿಸಿದರೆ ಕಳೆದ ಬಾರಿ ಕಣ್ಣಿಗೆ ಹಾನಿಯಾಗಿರುವುದು ಕಡಿಮೆ. ಸ್ವಲ್ಪ ಮಟ್ಟಿಗೆ ಜನ ಪಟಾಕಿಗಳಿಂದ ಹುಷಾರಾಗಿದ್ದಾರೆ ಅನಿಸುತ್ತದೆ. ಅದರಲ್ಲೂ ದಾವಣಗೆರೆಯಲ್ಲಿ ಈ ಪಟಾಕಿಯಿಂದ ಕಣ್ಣಿಗೆ ಹಾನಿಗೊಳದವರು ಹೆಚ್ಚಿದ್ದಾರೆ. ಕಳೆದ ನಾಲ್ಕೈದು ವರ್ಷಗಳಿಗೆ ಹೋಲಿಸಿದರೆ ಕಳೆದ ವರ್ಷ ಜನರ ಕಣ್ಣುಗಳಿಗೆ ಕೊಂಚ ಕಡಿಮೆ ಹಾನಿಯಾಗಿದೆ. ದಾವಣಗೆರೆಯಲ್ಲಿ ಕಳೆದ ಬಾರಿ ಹದಿನೈದು ಜನರ ಕಣ್ಣುಗಳಿಗೆ ಪಟಾಕಿಯಿಂದ ಹಾನಿಯಾಗಿತ್ತು.