ದಾವಣಗೆರೆ :ಚನ್ನಗಿರಿ ತಾಲೂಕಿನ ಗ್ರಾಮೀಣ ಭಾಗದಲ್ಲಿ ಪುಂಡಾನೆಯ ಉಪಟಳ ಮುಂದುವರೆದಿದೆ. ಒಂಟಿ ಸಲಗದ ಉಪಟಳಕ್ಕೆ ಅಡಿಕೆ ನಾಡು ಚನ್ನಗಿರಿ ಜನರು ರೋಸಿ ಹೋಗಿದ್ದಾರೆ. ಚಿತ್ರದುರ್ಗದ ಕಡೆಯಿಂದ ಆಗಮಿಸಿದ ಒಂಟಿ ಸಲಗ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಸೋಮ್ಲಾಪುರ, ಕಾಶಿಪುರ, ಸೂಳೆಕೆರೆ ಸುತ್ತಾಮುತ್ತಲು ತನ್ನ ಆರ್ಭಟ ಮುಂದುವರೆಸಿರುವ ಪುಂಡಾನೆಯ ಆರ್ಭಟಕ್ಕೆ ಒಬ್ಬ ಯುವತಿ ಬಲಿಯಾಗಿದ್ದು, ನಾಲ್ವರು ಗಾಯಗೊಂಡು ಆಸ್ಪತ್ರೆಯ ಪಾಲಾಗಿದ್ದಾರೆ. ಆದ್ದರಿಂದ ಪುಂಡಾನೆಯ ಸೆರೆಗೆ ಎರಡು ತಂಡಗಳು ಆಗಮಿಸಿದ್ದು, ಸಕ್ರೆಬೈಲು ಆನೆ ಬಿಡಾರದಿಂದ ಡಾ.ವಿನಯ್ ನೇತೃತ್ವದಲ್ಲಿ ಸಾಗರ್, ಬಾಲಣ್ಣ, ಬಹದ್ದೂರ್ ಆನೆಗಳು ಈಗಾಗಲೇ ಅರಶಿನಘಟ್ಟದ ಬಳಿಯ ಆಗಮಿಸಿ ಠಿಕಾಣಿ ಹೂಡಿವೆ.
ಇಂದು ನಾಗರಹೊಳೆ ಆನೆ ಬಿಡಾರದಿಂದ ಡಾ. ರಮೇಶ್ ನೇತೃತ್ವದಲ್ಲಿ ಅಭಿಮನ್ಯು, ಕರ್ನಾಟಕ ಭೀಮ, ಮಹೇಂದ್ರ ಮೂರು ಆನೆಗಳಿಂದ ಪುಂಡಾನೆಯ ಸೆರೆಗೆ ಅರಣ್ಯ ಇಲಾಖೆಯ ಸಿಬ್ಬಂದಿ ತಂತ್ರವನ್ನು ರೂಪಿಸುತ್ತಿದ್ದಾರೆ. ಸೂಳೆಕೆರೆ, ಹರಿಸಿನಘಟ್ಟ ಹಾಗು ಸೂಳೆಕೆರೆಯ ಹಿನ್ನೀರಿನ ಸುತ್ತಮುತ್ತ ಓಡಾಡುತ್ತಿರುವ ಕಾಡಾನೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಕೂಂಬಿಂಗ್ ಮಾಡುತ್ತಿದ್ದಾರೆ. ಇದೀಗ ಪುಂಡಾನೆ ಮಾವಿನಹೊಳೆ, ಉಬ್ರಾಣಿ ಹೋಬಳಿ, ಕೊಮರನಹಳ್ಳಿ ಸುತ್ತಮುತ್ತ ಇದೆ ಎಂಬ ಮಾಹಿತಿ ಲಭ್ಯವಾಗಿದ್ದು, ಇಂದಿಗೆ ಎರಡನೇ ದಿನ ಕಾರ್ಯಚರಣೆ ಮುಂದುವರೆದಿದೆ.
ಡಿಎಫ್ ಓ ಶಿವಶರಣಯ್ಯ ಪ್ರತಿಕ್ರಿಯೆ : ಈ ವೇಳೆ ಮಾತನಾಡಿದ ಡಿಎಫ್ ಓ ಶಿವಶರಣಯ್ಯ, ಒಂಟಿ ಸಲಗ ಕಾಣಿಸಿಕೊಂಡಿದ್ದರಿಂದ ಕಾರ್ಯಚರಣೆ ನಡೆಸುತ್ತಿದ್ದೇವೆ. ಮೂರು ಆನೆಗಳನ್ನು ತರೆಸಿದ್ದು, ಒಬ್ಬ ಯುವತಿ ಸಾವನ್ನಪ್ಪಿದು ಪರಿಹಾರ ಘೋಷಣೆ ಮಾಡಿದೆ. ಆನೆ ಶೃಂಗಾರವರದ ಕಾಡಿನಲ್ಲಿರಬಹುದೆಂದು ತಿಳಿದುಬಂದಿದ್ದು, ಈ ಭಾಗದ ರೈತರ ಗ್ರಾಮಸ್ಥರು ಅಲರ್ಟ್ ಆಗಿರಬೇಕೆಂದು ಮನವಿ ಮಾಡಿದರು.