ಕರ್ನಾಟಕ

karnataka

ETV Bharat / state

ನಕಲಿ ವೆಬ್​ಸೈಟ್ ಮೂಲಕ ಪಂಗನಾಮ: 8 ಕೋಟಿ ವಂಚಿಸಿದ್ದ ಖದೀಮರು ಅಂದರ್ - undefined

ನಕಲಿ ವೆಬ್​ಸೈಟ್ ಬಳಸಿ ಆನ್​ಲೈನ್ ಮೂಲಕ ಹಣ ಕಟ್ಟಿಸಿಕೊಂಡು ಜನರಿಗೆ ಸುಮಾರು 8 ಕೋಟಿ ಪಂಗನಾಮ ಹಾಕಿ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಪೊಲೀಸರು ಕಂಬಿ ಹಿಂದೆ ಹಾಕಿದ್ದಾರೆ.

ಬಂಧಿತ ಆರೋಪಿಗಳು

By

Published : Apr 13, 2019, 12:49 PM IST

ದಾವಣಗೆರೆ :ನೂರಾರು ಜನರಿಂದ ಆನ್​ಲೈನ್ ಮೂಲಕ ಹಣ ಕಟ್ಟಿಸಿಕೊಂಡು ವಂಚಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಖತರ್ನಾಕ್ ಖದೀಮರನ್ನು ನಗರದ ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಈ ಆರೋಪಿಗಳು ನೂರಾರು ಮಂದಿಯಿಂದ ಹಣ ಪಾವತಿಸಿಕೊಂಡು ಸುಮಾರು 8 ಕೋಟಿ ರೂಪಾಯಿಗೂ ಹೆಚ್ಚು ವಹಿವಾಟು ನಡೆಸಿ ಪಂಗನಾಮ ಹಾಕಿದ್ದು ಬೆಳಕಿಗೆ ಬಂದಿದೆ.

ತಮಿಳುನಾಡಿನ ಮಧುರೈ ಮೂಲದ ಸೈಯ್ಯದ್ ಇಬ್ರಾಹಿಂ ಹಾಗೂ ಕೋಲಾರ ಜಿಲ್ಲೆಯ ಮುದವಾಡಿ ಗ್ರಾಮದ ಎಂ. ಆರ್. ರಾಜು ಬಂಧಿತ ಆರೋಪಿಗಳು. ತಮಿಳುನಾಡಿನ 2020 ಬಿಲಿಯನ್ ಮಾರ್ಕೆಟಿಂಗ್ ಕಂಪೆನಿ ಹೆಸರಿನಲ್ಲಿ ನಕಲಿ ವೆಬ್​ಸೈಟ್ ತೆರೆದು ಆನ್​ಲೈನ್ ಮೂಲಕ ನೂರಾರು ಜನರಿಂದ 1.10 ಲಕ್ಷ ರೂಪಾಯಿ ಕಟ್ಟಿಸಿಕೊಂಡು ವಂಚಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಚೇತನ್ ತಿಳಿಸಿದ್ದಾರೆ.

ನಕಲಿ ವೆಬ್​ಸೈಟ್ ಮೂಲಕ ಜನರನ್ನು ವಂಚಿಸಿದ್ದ ಆರೋಪಿಗಳ ಬಂಧನ

ವಂಚನೆ ಮಾಡುತ್ತಿದ್ದಾದರೂ ಹೇಗೆ...?
ಸೈಯ್ಯದ್ ಇಬ್ರಾಹಿಂ ಹಾಗೂ ರಾಜು www.2020billion.com ಎಂಬ ನಕಲಿ ವೆಬ್​ಸೈಟ್ ತೆರೆದು, ಈ ಮೂಲಕ ಜನರನ್ನು ವಂಚನೆ ಮಾಡುತ್ತಿದ್ದರು. ಪ್ರತಿಯೊಬ್ಬರು 1.10 ಲಕ್ಷ ರೂಪಾಯಿ ಹೂಡಿಕೆ ಮಾಡಿದರೆ ಅವರಿಗೆ ನಿತ್ಯ 1 ಸಾವಿರ ರೂಪಾಯಿ ನೀಡಲಾಗುವುದು. ಕಟ್ಟಿದ ಹಣಕ್ಕಿಂತ ಹೆಚ್ಚಿನ ಹಣ ಬರುತ್ತದೆ ಎಂದು ನಂಬಿಸಿ ಸುಮಾರು 706 ಜನರಿಂದ ಹಣ ಹೂಡಿಕೆ ಮಾಡಿಸಿಕೊಂಡಿದ್ದರು. ಅದಕ್ಕೆ ಆಯಾ ಪ್ರದೇಶಗಳಲ್ಲಿ ಏಜೆಂಟರನ್ನು ನೇಮಿಸಿಕೊಂಡು ಜನರನ್ನು ನಂಬಿಸುತ್ತಿದ್ದರು.

ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಮುಸ್ಟೂರಿನ ತಿಪ್ಪೇಸ್ವಾಮಿ ಎಂಬುವವರು ಚಿಟ್ ಫಂಡ್ ಮ್ಯಾನೇಜರ್ ರಾಮಕೃಷ್ಣ ಎಂಬುವರಿಂದ 1.10 ಲಕ್ಷ ಹಣ ಕಟ್ಟಿಸಿಕೊಂಡಿದ್ದರು. ಬಳಿಕ ಇವರಿಗೆ ಏಜೆಂಟರ್​ನ್ನು ನೇಮಕ ಮಾಡುವಂತೆಯೂ ಹೇಳಿದ್ದರು. ಹಾಗಾಗಿ ರಾಮಕೃಷ್ಣ ಕೂಡ ಪರಿಚಯಸ್ಥರಿಂದ ಹಣ ಹೂಡಿಕೆ ಮಾಡಿಸಿದ್ದರು. ಹೂಡಿಕೆ ಮಾಡಿದ ಕೆಲವು ದಿನಗಳು ಮಾತ್ರ ಒಂದು ದಿನಕ್ಕೆ ಒಂದು ಸಾವಿರ ರೂಪಾಯಿಯಂತೆ ಕೆಲ ದಿನಗಳ ಕಾಲ ಹಣ ಹಾಕಿದ ಇಬ್ರಾಹಿಂ ಮತ್ತು ರಾಜು ಬಳಿಕ ನಾಪತ್ತೆಯಾಗಿದ್ದರು. ಇವರನ್ನು ಭೇಟಿಯಾಗಲು ರಾಮಕೃಷ್ಣ ಮಧುರೈಗೆ ಹೋದರು ಸಿಕ್ಕಿರಲಿಲ್ಲ.

ರಾಮಕೃಷ್ಣ ಅವರು 110 ಜನರಿಂದ ತಲಾ 1.10 ಲಕ್ಷ ರೂಪಾಯಿಯಂತೆ ಎಂ. ಆರ್. ರಾಜು ನೀಡಿದ ಬ್ಯಾಂಕಿನ ಖಾತೆಗೆ ಹಣ ಹಾಕಿಸಿದ್ದಾರೆ. ಆದರೆ ಕೆಲ ದಿನಗಳ ಬಳಿಕ ಹಣ ಬರುವುದು ನಿಂತು ಹೋಗಿದೆ. ಹಾಗಾಗಿ ರಾಮಕೃಷ್ಣ ಅವರು 2018ರ ಅಕ್ಟೋಬರ್ ತಿಂಗಳಿನಲ್ಲಿ ದಾವಣಗೆರೆಯ ಸಿಇಎನ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಖತರ್ನಾಕ್ ಖದೀಮರನ್ನ ಖೆಡ್ಡಾಕ್ಕೆ ಕೆಡವಿದ ಪೊಲೀಸರು....!
ರಾಮಕೃಷ್ಣ ನೀಡಿದ ಪ್ರಕರಣ ದಾಖಲಿಸಿಕೊಂಡ ಸಿಇಎನ್ ಠಾಣಾ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದರು. ತನಿಖೆ ಕೈಗೆತ್ತಿಕೊಂಡ ಸಿಇಎನ್ ಠಾಣೆಯ ಪೊಲೀಸ್ ಇನ್ ಸ್ಪೆಕ್ಟರ್ ಟಿ. ವಿ. ದೇವರಾಜ್ ನೇತೃತ್ವದ ತಂಡದ ಮಾಹಿತಿ ಮೇರೆಗೆ ದಾಳಿ ನಡೆಸಿ ಬೆಂಗಳೂರಿನಲ್ಲಿ ಇಬ್ಬರು ಖದೀಮರನ್ನು ವಶಕ್ಕೆ ಪಡೆದಿದಿದ್ದಾರೆ.

ತಿಪ್ಪೇಸ್ವಾಮಿ ಅವರು ಸುಮಾರು 300 ಜನರಿಂದ ಮತ್ತು ಅವರಿಗೆ ಈ ಕಂಪೆನಿ ಬಗ್ಗೆ ಮಾಹಿತಿ ನೀಡಿದ್ದ ಗೋವಿಂದರಾಜು ಅವರು 706 ಮಂದಿಯಿಂದ ಹೂಡಿಕೆ ಮಾಡಿಸಿದ್ದಾರೆ. ಜನರನ್ನು ನಂಬಿಸಿ 8 ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ಬ್ಯಾಂಕ್ ಖಾತೆಗೆ ಸೈಯ್ಯದ್ ಇಬ್ರಾಹಿಂ ಮತ್ತು ಎಂ. ಆರ್. ರಾಜು ಹಾಕಿಸಿಕೊಂಡಿದ್ದಾರೆ ಎಂದು ರಾಮಕೃಷ್ಣ ದೂರಿನಲ್ಲಿ ಆರೋಪಿಸಿದ್ದರು. ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದ ಆರೋಪಿಗಳನ್ನು ಪುನಃ ವಶಕ್ಕೆ ಪಡೆದು ಮಧುರೈ, ಕೋಲಾರ, ಬೆಂಗಳೂರು, ಚಿತ್ರದುರ್ಗಕ್ಕೆ ಕರೆದುಕೊಂಡು ಹೋಗಿ ಪೊಲೀಸರು ತನಿಖೆ ನಡೆಸಿದಾಗ ದಾವಣಗೆರೆ, ಚಿತ್ರದುರ್ಗ, ಬಳ್ಳಾರಿ ಹಾಗೂ ತುಮಕೂರು ಜಿಲ್ಲೆಗಳ ಅನೇಕ ಜನರಿಂದ ಹಣ ಹಾಕಿಸಿಕೊಂಡು ವಂಚಿಸಿರುವುದು ಖಚಿತವಾಗಿದೆ ಎಂದು ಎಸ್ಪಿ ಚೇತನ್ ಮಾಹಿತಿ ನೀಡಿದರು.

ಸೈಯ್ಯದ್ ಇಬ್ರಾಹಿಂ ಪತ್ನಿ ಮಮ್ತಾಜ್ ಹೆಸರಿನಲ್ಲಿರುವ ಒಟ್ಟು 14 ಬ್ಯಾಂಕ್ ಖಾತೆಗಳಿಗೆ ಆರೋಪಿಗಳು ಹಣ ಹಾಕಿಸಿಕೊಳ್ಳುತ್ತಿದ್ದದ್ದು ಬೆಳಕಿಗೆ ಬಂದಿದೆ. ಇವರ ಬ್ಯಾಂಕ್ ಖಾತೆ ಪರಿಶೀಲನೆ ನಡೆಸಿದಾಗ 8 ಕೋಟಿ ರೂಪಾಯಿಗೂ ಅಧಿಕ ಹಣ ವಹಿವಾಟು ನಡೆದಿರುವುದು ಕಂಡು ಬಂದಿದೆ. ಈ ಎಲ್ಲಾ ಹಣವನ್ನು ಬೇರೆ ಬೇರೆ ಖಾತೆಗಳಿಗೆ ವರ್ಗಾವಣೆ ಮಾಡಿಕೊಳ್ಳಲಾಗಿದೆ. ಕಂಪೆನಿಗೆ ವೆಬ್ ಸೈಟ್ ಯಾರು ಮಾಡಿಕೊಟ್ಟದ್ದು. ಕಂಪೆನಿ ಆರಂಭಿಸಲು ಪರವಾನಗಿ ಪಡೆದಿದ್ದಾರೆಯೋ. ಈ ಐಡಿಯಾ ಕೊಟ್ಟವರು ಯಾರು.. ಇದರ ಹಿಂದೆ ಇನ್ನು ಯಾರ್ಯಾರು ಇದ್ದಾರೆ. ಇವರ ಬ್ಯಾಂಕ್ ಖಾತೆಯಿಂದ ಬೇರೆ ಯಾರ ಖಾತೆಗೆ ಹಣ ಜಮಾವಣೆಯಾಗಿದೆ ಎಂಬ ಕುರಿತು ತನಿಖೆ ನಡೆಸಲಾಗುವುದು. ಆದಷ್ಟು ಬೇಗ ಮಮ್ತಾಜ್ ಅವರನ್ನೂ ಬಂಧಿಸಲಾಗುವುದು ಎಂದು ಹೇಳಿದ್ದಾರೆ.

For All Latest Updates

TAGGED:

ABOUT THE AUTHOR

...view details