ದಾವಣಗೆರೆ: ಜಿಲ್ಲೆಯಲ್ಲಿ ಕೊರೊನಾಗೆ 90 ವರ್ಷದ ವೃದ್ಧ ಬಲಿಯಾಗಿದ್ದು, ಮೃತರ ಸಂಖ್ಯೆ 7ಕ್ಕೆ ಏರಿದೆ. P-7208 ಸಂಖ್ಯೆಯ ವೃದ್ಧ ಬಲಿಯಾಗಿದ್ದಾರೆ.
ಜೂ. 13ರಂದು ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು. ಬಳಿಕ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಿದಾಗ ಕೊರೊನಾ ಸೋಂಕು ಇರುವುದು ಪತ್ತೆಯಾಗಿತ್ತು. ಇಂದು ಜಿಲ್ಲಾಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
ಕೋವಿಡ್ ಜಿಲ್ಲಾಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಮೂವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇಂದು ನಾಲ್ಕು ಕೊರೊನಾ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 249ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾಡಳಿತ ಸ್ಪಷ್ಟನೆ ನೀಡಿದೆ.
ಇಂದು ಮತ್ತೆ ಐವರು ಸೋಂಕಿನಿಂದ ಸಂಪೂರ್ಣ ಗುಣಮುಖರಾಗಿದ್ದು, ಒಟ್ಟು 220 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 492 ಸ್ಯಾಂಪಲ್ಗಳು ನೆಗೆಟಿವ್ ಬಂದಿದ್ದು, ಇನ್ನೂ 476 ಮಂದಿಯ ಗಂಟಲು ದ್ರವ ಪರೀಕ್ಷೆಗೆ ಶನಿವಾರ ಸಂಗ್ರಹಿಸಲಾಗಿದೆ. 961 ಸ್ಯಾಂಪಲ್ಗಳ ಪರೀಕ್ಷಾ ವರದಿ ಬರಬೇಕಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಆರ್. ಬೀಳಗಿ ಮಾಹಿತಿ ನೀಡಿದ್ದಾರೆ.
ಐವರು ಗರ್ಭಿಣಿಯರಿಗೆ ಸೋಂಕು!?
ಹರಿಹರದ 18 ವರ್ಷದ ಗರ್ಭಿಣಿ, ತಾಲೂಕಿನ ದೊಡ್ಡಬಾತಿ ಕುಂಚೂರು ಕ್ಯಾಂಪ್ನ 20 ವರ್ಷದ ಮಹಿಳೆ, ಆವರಗೊಳ್ಳ ಗ್ರಾಮದ ಇಬ್ಬರು ಗರ್ಭಿಣಿಯರು ಹಾಗೂ ಮುದ್ದಾಬೋವಿ ಕಾಲೋನಿಯ ಗರ್ಭಿಣಿಗೆ ಸೋಂಕು ತಗುಲಿರುವ ಶಂಕೆ ಇದೆ. ಮತ್ತೊಮ್ಮೆ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿ ಬರಬೇಕಿದೆ. ಬಳಿಕವಷ್ಟೇ ಗೊತ್ತಾಗಲಿದೆ ಎಂದು ಆರೋಗ್ಯ ಇಲಾಖೆಯ ಉನ್ನತ ಮೂಲಗಳು ತಿಳಿಸಿವೆ.