ತೆವಳಿಕೊಂಡು ಪೋಸ್ಟ್ ಆಫೀಸ್ಗೆ ಬಂದ ವೃದ್ಧೆ ದಾವಣಗೆರೆ: ಮಾಸಾಶನ ಪಡೆಯಲು ವೃದ್ಧೆ 2 ಕಿಮೀ ತೆವಳಿಕೊಂಡು ಪೋಸ್ಟ್ ಆಫೀಸ್ಗೆ ಬಂದ ಅಮಾನವೀಯ ಘಟನೆ ಹರಿಹರದ ಕುಣೆಬೆಳಕೆರೆ ಗ್ರಾಮದಲ್ಲಿ ನಡೆದಿದೆ. ಹರಿಹರ ತಾಲೂಕಿನ ನಂದಿತಾವರೆಯ ಗಿರಿಜಮ್ಮ ಎಂಬ ವೃದ್ಧೆ ಕಳೆದ ಎರಡು ತಿಂಗಳುಗಳಿಂದ ಮಾಸಾಶನ ಬಾರದ ಹಿನ್ನೆಲೆ ನಂದಿತಾವರೆಯಿಂದ ತೆವಳಿಕೊಂಡು ಕುಣೆಬೆಳಕೆರೆ ಗ್ರಾಮಕ್ಕೆ ಬಂದಿದ್ದಾರೆ.
ಕುಣೆಬೆಳಕೆರೆ ಪೋಸ್ಟ್ ಆಫೀಸ್ನಿಂದ ವೃದ್ಧೆಗೆ ಮಾಸಾಶನ ಬರುತ್ತಿತ್ತು. ಆದರೆ, ಕಳೆದ ಎರಡು ತಿಂಗಳುಗಳಿಂದ ಮಾಸಾಶನ ವೃದ್ಧೆಯ ಕೈಸೇರಿಲ್ಲ. ಈ ಬಗ್ಗೆ ಪೋಸ್ಟ್ ಮ್ಯಾನ್ ಬಳಿ ವಿಚಾರಿಸಿದಾಗ 2 ತಿಂಗಳುಗಳಿಂದ ಹಣ ಬಂದಿಲ್ಲ ಎಂದು ಹೇಳಿದ್ದರು. ಮಕ್ಕಳಿಲ್ಲದ ವೃದ್ಧೆಗೆ ಮಾಸಾಶನವೇ ಜೀವನಾಧಾರವಾಗಿತ್ತು. ಹೀಗಾಗಿ ವೃದ್ಧೆ ಗಿರಿಜಮ್ಮ ಮಾಸಾಶನದ ಕುರಿತು ವಿಚಾರಿಸಲು 2 ಕಿಮೀ ತೆವಳಿಕೊಂಡು ಕುಣಿಬೆಳೆಕೆರೆ ಗ್ರಾಮದ ಪೋಸ್ಟ್ ಆಫೀಸ್ಗೆ ಆಗಮಿಸಿದ್ದಾರೆ. ಮಾಸಾಶನ ಪಡೆಯಲು ತೆವಳಿಕೊಂಡು ಬಂದಿದ್ದರಿಂದ ಅಜ್ಜಿಗೆ ಕಾಲಲ್ಲಿ ಬೊಬ್ಬೆಗಳೆದ್ದಿವೆ. ಇದರಿಂದ ಎಚ್ಚೆತ್ತ ಗ್ರಾಮ ಪಂಚಾಯಿತಿ ಅಧಿಕಾರಿಗಳು ವೃದ್ಧೆಯನ್ನು ಹರಿಹರ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
ಈ ಕುರಿತು ವೃದ್ಧೆ ಗಿರಿಜಮ್ಮ ಮಾತನಾಡಿ, "ಮಸಾಶನದ ಬಗ್ಗೆ ವಿಚಾರಿಸಲು ಬೆಳಗ್ಗೆ 8 ಗಂಟೆಗೆ ನಂದಿತಾವರೆ ರೇಣುಕಾ ಕ್ಯಾಂಪ್‌ನಿಂದ ಹೊರಟು ಸಂಜೆ 4 ಗಂಟಗೆ ಕುಣೆಬೆಳೆಕೆರೆಯ ಪೋಸ್ಟ್ ಆಫೀಸ್ಗೆ ತಲುಪಿದೆ. ನನಗೆ ಎರಡು ತಿಂಗಳಿನಿಂದ ಮಾಸಾಶನ ಬಂದಿಲ್ಲ. ಈ ಬಗ್ಗೆ ಪೋಸ್ಟ್ ಮ್ಯಾನ್ ಬಳಿ ಕೇಳಿದರೆ ಹಣ ಬಂದಿಲ್ಲ ನಡಿ ಎಂದು ಗದರಿಸಿ ಕಳುಹಿಸುತ್ತಾನೆ. ನನ್ನ ಮೃತ ಪತಿಯ 10 ಸಾವಿರ ರೂಪಾಯಿ ಹಣ ಬರಬೇಕಿತ್ತು ಅದನ್ನು ಕೊಟ್ಟಿಲ್ಲ. ಆಟೋಗೆ ಹಣ ಇಲ್ಲದ ಕಾರಣ ತೆವಳಿಕೊಂಡು ಬಂದಿದ್ದೇನೆ. ನನಗೆ ಮಕ್ಕಳು ಯಾರೂ ಇಲ್ಲ" ಎಂದು ಅಳಲು ತೊಡಿಕೊಂಡರು.
ಕುಣೆಬೆಳೆಕೆರೆ ಆಶಾ ಕಾರ್ಯಕರ್ತೆ ಆಶಾ ಎಂಬುವವರು ಮಾತನಾಡಿ, "ವೃದ್ಧೆ ಗಿರಿಜಮ್ಮ ಪಿಂಚಣಿ ಹಣ ಬಂದಿಲ್ಲ ಎಂದು ಕುಣೆಬೆಳಕೆರೆ ಗ್ರಾಮಕ್ಕೆ ತೆವಳಿಕೊಂಡು ಬರುತ್ತಿದ್ದರು. ಅವರ ವಿಡಿಯೋವನ್ನು ಸಾರ್ವಜನಿಕರು ಯಾರೋ ತಹಶೀಲ್ದಾರ್ಗೆ ಕಳುಹಿಸಿದ್ದಾರೆ. ವೃದ್ಧೆಗೆ ಸಮಸ್ಯೆಯಾಗಿದ್ದು, ನೀವು ನೋಡಿಕೊಳ್ಳಿ ಎಂದು ನನಗೆ ಸೂಚಿಸಿದರು. ಅದರಂತೆ ನಾನು ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲು ಮಾಡಿದ್ದೇನೆ. ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಅವರಿಗೆ ಊಟ -ತಿಂಡಿ ವ್ಯವಸ್ಥೆ ಮಾಡಲಾಗಿದೆ. ಅವರಿಗೆ ಸಂಬಂಧಿಕರು ಯಾರೂ ಇಲ್ಲ. ಅವರು ಒಬ್ಬರೇ ಇರುವುದರಿಂದ ಸದ್ಯ ನಾವೇ ನೋಡಿಕೊಳ್ಳುತ್ತಿದ್ದೇವೆ" ಎಂದು ತಿಳಿಸಿದರು.
ಇದನ್ನೂ ಓದಿ:ಬೆಳಗಾವಿಯಲ್ಲಿ ಮತ್ತೊಂದು ಅಮಾನವೀಯ ಘಟನೆ: ಮಹಿಳೆ ಅರೆಬೆತ್ತಲೆಗೊಳಿಸಿ ಹಲ್ಲೆ ಆರೋಪ