ದಾವಣಗೆರೆ/ಶಿವಮೊಗ್ಗ: ಜಿಲ್ಲೆಯಲ್ಲಿ ಮಳೆ ಮುಂದುವರೆದಿದೆ. ನಿರಂತರ ಮಳೆ ಬೀಳುತ್ತಿರುವ ಬೆನ್ನಲ್ಲೇ ಮನೆ ಕುಸಿದ ಪರಿಣಾಮ ವೃದ್ಧ ದಂಪತಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಜಿಲ್ಲೆಯ ಜಗಳೂರು ತಾಲೂಕಿನ ಮುಸ್ಟೂರ್ ಗ್ರಾಮದಲ್ಲಿ ತಡ ರಾತ್ರಿ ಜರುಗಿದೆ. ನಿಂಗಪ್ಪ (60) ಮತ್ತು ಕೆಂಚಮ್ಮ (55) ಗಾಯಗೊಂಡಿರುವ ದಂಪತಿ. ಮನೆಯಲ್ಲಿ ಗಾಢ ನಿದ್ರೆಯಲ್ಲಿ ಮಲಗಿದ್ದ ವೇಳೆ ಮನೆ ಗೋಡೆ ಕುಸಿದಿದ್ದು, ಬಡಪಾಯಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮನೆಯ ಮಾಳಿಗೆ ಕುಸಿದಿದ್ದರಿಂದ ಭಾರಿ ಅನಾಹುತ ತಪ್ಪಿದ್ದು, ಸ್ಥಳೀಯರ ಸಹಕಾರದಿಂದ ಗಾಯಾಳು ದಂಪತಿಯನ್ನು ತುರ್ತಾಗಿ ಚಿಕಿತ್ಸೆಗಾಗಿ ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು, ಮಾಹಿತಿ ತಿಳಿದು ಘಟನಾ ಸ್ಥಳಕ್ಕೆ ಆಗಮಿಸಿದ ಜಗಳೂರು ತಹಶೀಲ್ದಾರ್ ಸಂತೋಷ್ ಪರಿಶೀಲನೆ ನಡೆಸಿದರು. ಜಗಳೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಬೀಳುವ ಹಂತಕ್ಕೆ ತಲುಪಿರುವ ಮನೆಗಳಲ್ಲಿ ಯಾರೂ ವಾಸ ಮಾಡಬಾರದು ಎಂದು ತಹಶೀಲ್ದಾರ್ ಸಂತೋಷ್ ಅವರು ಜನರಿಗೆ ಸಂದೇಶ ರವಾನಿಸಿದ್ದಾರೆ.