ದಾವಣಗೆರೆ :ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆ ಮತದಾರರ ಮೇಲೆ ಪ್ರಭಾವ ಬೀರುವುದಾಗಿ ತಿಳಿಸಿ ಸಿ-ವಿಜಿಲ್ನಲ್ಲಿ ದಾಖಲಾದ ದೂರಿಗೆ ಸಂಬಂಧಿಸಿದಂತೆ ನಟ, ರಾಜ್ಯಸಭಾ ಸದಸ್ಯ ಜಗ್ಗೇಶ್ ಅವರ ಹೊಸ ಸಿನಿಮಾ ಪೋಸ್ಟರ್ಗೆ ಅಧಿಕಾರಿಗಳು ಮುಖಕ್ಕೆ ಬಿಳಿ ಹಾಳೆ ಅಂಟಿಸಿದ್ದಾರೆ.
ಹೊಂಬಾಳೆ ಫಿಲ್ಮ್ಸ್ ಅವರ ಬ್ಯಾನರ್ ಅಡಿಯಲ್ಲಿ ತಯಾರಾಗಿರುವ ರಾಘವೇಂದ್ರ ಸ್ಟೋರ್ ಸಿನಿಮಾ ಬಿಡುಗಡೆಗೊಂಡು ಪ್ರದರ್ಶನಗೊಳ್ಳುತ್ತಿದೆ. ಈ ಸಿನಿಮಾಗೆ ಚುನಾವಣಾ ನೀತಿ ಸಂಹಿತೆಯ ಬಿಸಿ ಮುಟ್ಟಿದೆ. ಇಂದು ದಾವಣಗೆರೆ ನಗರದ ಗೀತಾಂಜಲಿ ಚಿತ್ರಮಂದಿರದಲ್ಲಿ ಪ್ರದರ್ಶನಗೊಳ್ಳುತ್ತಿರುವ ನಟ ಜಗ್ಗೇಶ್ ಅಭಿನಯದ ರಾಘವೇಂದ್ರ ಸ್ಟೋರ್ ಚಿತ್ರವನ್ನು ಸ್ಥಗಿತಗೊಳಿಸುವಂತೆ ಹಾಗೂ ಪೋಸ್ಟರ್‌ಗಳನ್ನು ಮುಚ್ಚುವಂತೆ ಕಾಂಗ್ರೆಸ್ ಪಕ್ಷದಿಂದ ಸಿ-ವಿಜಿಲ್ ನಲ್ಲಿ ದೂರು ಸಲ್ಲಿಸಲಾಗಿತ್ತು. ಈ ದೂರಿನನ್ವಯ ಬಿಜೆಪಿಯಿಂದ ಜಗ್ಗೇಶ್ ರಾಜ್ಯಸಭಾ ಸದಸ್ಯರಾಗಿರುವುದರಿಂದ ಅವರು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸದ ಕಾರಣ ಚಿತ್ರ ಪ್ರದರ್ಶನವನ್ನು ಸ್ಥಗಿತಗೊಳಿಸದೆ ಪೋಸ್ಟರ್ಗಳಲ್ಲಿ ಅವರ ಮುಖವನ್ನು ಮರೆಮಾಚಲಾಗಿದೆ.
ಗೀತಾಂಜಲಿ ಚಿತ್ರಮಂದಿರದಲ್ಲಿ ಪರಿಶೀಲನೆ ನಡೆಸಿದ ಚುನಾವಣಾಧಿಕಾರಿಗಳು: ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ದಾವಣಗೆರೆ ನಗರದ ಗೀತಾಂಜಲಿ ಚಿತ್ರಮಂದಿರಕ್ಕೆ ಚುನಾವಣಾ ಅಧಿಕಾರಿಗಳು ತೆರಳಿ ಪರಿಶೀಲನೆ ನಡೆಸಿದ್ರು. ಸಿನಿಮಾ ಮಂದಿರದ ಬಳಿಯ ಕಟೌಟ್ ಮತದಾರರ ಮೇಲೆ ಪ್ರಭಾವ ಬೀರುವುದಾಗಿ ತಿಳಿಸಿ ಸಿ-ವಿಜಿಲ್ನಲ್ಲಿ ದಾಖಲಾದ ದೂರಿಗೆ ಸಂಬಂಧಿಸಿದಂತೆ ಚಿತ್ರಮಂದಿರಕ್ಕೆ ತೆರಳಿ ಅಧಿಕಾರಿಗಳು ಚಿತ್ರ ಪ್ರದರ್ಶನ ಮಾಡಲು ಯಾವುದೇ ನಿರ್ಬಂಧವನ್ನು ಮಾಡಿಲ್ಲ.