ಹರಿಹರ:ವಾರದ ಸಂತೆ ರದ್ದಾದ ಹಿನ್ನೆಲೆ ಮತ್ತು ಯುಗಾದಿ ಹಬ್ಬಕ್ಕೆ ತರಕಾರಿ ಕೊಂಡುಕೊಳ್ಳಲು ಮುಗಿಬಿದ್ದ ಜನರನ್ನು ಕಂಡ ಪೊಲೀಸ್ ಅಧಿಕಾರಿಗಳು ಕೊರೊನಾ ವೈರಸ್ ಬಗ್ಗೆ ಎಷ್ಟೇ ಜಾಗೃತಿಯನ್ನು ಮೂಡಿಸಿದರೂ ಎಚ್ಚೆತ್ತು ಕೊಳ್ಳದ ಜನರನ್ನು ನೋಡಿ ಲಘುವಾಗಿ ಲಾಠಿ ರುಚಿಯನ್ನು ತೋರಿಸುವ ಮೂಲಕ ಸಾರ್ವಜನಿಕರನ್ನು ಚದುರಿಸಿದ ಘಟನೆ ನಡೆಯಿತು.
ಮಂಗಳವಾರ ಬೆಳಗ್ಗೆಯಿಂದಲೇ ತಹಶೀಲ್ದಾರ್ ಕೆ.ಬಿ.ರಾಮಚಂದ್ರಪ್ಪ, ಪೌರಾಯುಕ್ತೆ ಎಸ್. ಲಕ್ಷ್ಮೀ ಹಾಗೂ ಸಿಪಿಐ ಶಿವಪ್ರಸಾದ್ ,ನಗರ ಠಾಣೆ ಪಿಎಸ್‌ಐ ಎಸ್.ಶೈಲಶ್ರೀ, ಗ್ರಾಮಾಂತರ ಠಾಣೆ ಪಿಎಸ್‌ಐ ಡಿ. ರವಿಕುಮಾರ್, ಅಪರಾಧ ವಿಭಾಗದ ಪಿಎಸ್‌ಐ ಭಾರತಿ ನೇತೃತ್ವದ ತಂಡ ತರಕಾರಿ ಮಾರಾಟಕ್ಕೆ ಮತ್ತು ಕೊಂಡುಕೊಳ್ಳಲು ಬಂದ ಸಾರ್ವಜನಿಕರಿಗೆ ವೈರಸ್ನಿಂದ ಆಗುವ ದುಷ್ಪರಿಣಾಮ ಮತ್ತು ಗುಂಪು ಗುಂಪಾಗಿ ಸೇರಿದರೆ ಅನಾಹುತ ತಪ್ಪಿದಲ್ಲ ಎಂದು ನಗರದ ಮುಖ್ಯ ರಸ್ತೆ, ತರಕಾರಿ ಮಾರುಕಟ್ಟೆ, ಹಳೆ ಪಿ.ಬಿ.ರಸ್ತೆ ಹಾಗೂ ಹಳೆ ಕೋರ್ಟ್ ಭಾಗದಲ್ಲಿ ಜಾಗೃತಿ ಮೂಡಿಸುತ್ತಿದ್ದರು.
ಯುಗಾದಿ ಹಬ್ಬಕ್ಕೆ ತರಕಾರಿ ಕೊಂಡುಕೊಳ್ಳಲು ಮುಗಿಬಿದ್ದ ಜನರನ್ನು ಕಂಡ ಪೊಲೀಸ್ ಅಧಿಕಾರಿಗಳು ಲಘುವಾಗಿ ಲಾಠಿ ರುಚಿ ತೋರಿಸಿದರು. ತಾಲೂಕು ದಂಡಾಧಿಕಾರಿ ಕೆ.ಬಿ. ರಾಮಚಂದ್ರಪ್ಪ ಮಾತನಾಡಿ ಸರ್ಕಾರದಿಂದ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದು, ನಾವುಗಳು ಕೊರೊನಾ ವೈರಸ್ ವಿರುದ್ಧ ಒಗ್ಗಟ್ಟಿನಿಂದ ಹೋರಾಟ ಮಾಡಬೇಕಾಗಿದೆ. ರಸ್ತೆಗಳಲ್ಲಿ ಯುವಕರು ಬೈಕ್ ಮತ್ತು ತಮ್ಮ ವಾಹನಗಳಲ್ಲಿ ಸುಖಾಸುಮ್ಮನೆ ಓಡಾಡುವ ಬದಲಿಗೆ ಮನೆಯಲ್ಲಿದ್ದು ವೈರಸ್ ವಿರುದ್ಧ ನಡೆಯುತ್ತಿರುವ ಸರ್ಕಾರದ ಕ್ರಮಗಳಿಗೆ ತಾವುಗಳು ಸಹಕರಿಸುವಂತೆ ಮನವರಿಕೆ ಮಾಡಿದರು.
ಇನ್ನು ಪೌರಾಯುಕ್ತೆ ಎಸ್.ಲಕ್ಷ್ಮಿ ಮಾತನಾಡಿ ನಮ್ಮ ಸಿಬ್ಬಂದಿ ಮುಖ್ಯವಾಗಿ ಪೌರ ಕಾರ್ಮಿಕರು ತಮ್ಮ ಜೀವದ ಹಂಗು ತೊರೆದು ಸರ್ಕಾರದ ಈ ಆಂದೋಲನದಲ್ಲಿ ಭಾಗವಹಿಸಿದ್ದಾರೆ. ಅವರೆಲ್ಲರಿಗೂ ನಾನು ಚಿರ ಋಣಿಯಾಗಿದ್ದೇನೆ. ಅದೇ ರೀತಿ ನಗರದ ಜನತೆಯೂ ಸಹ ಈ ಆಂದೋಲನಕ್ಕೆ ತಮ್ಮ ಬೆಂಬಲ ನೀಡುವುದರ ಜೊತೆಗೆ ಮಾರಕ ಕೊರೊನಾ ವೈರಸ್ ವಿರುದ್ಧ ಸರ್ಕಾರದೊಂದಿಗೆ ಕೈಜೋಡಿಸಲು ಮನವಿ ಮಾಡಿದರು.