ದಾವಣಗೆರೆ: ಇತ್ತೀಚಿನ ದಿನಗಳಲ್ಲಿ ಯುವಕರಿಗೆ ಬೈಕ್ ಓಡಿಸುವ ಕ್ರೇಜ್ ಜೊತೆಗೆ ಹಾರ್ನ್ ಶಬ್ಧ ಜೋರಾಗಿ ಕೇಳಬೇಕೆಂಬ ಹುಚ್ಚು ಹೆಚ್ತಾಗುತ್ತಿದೆ. ಅದರಲ್ಲಿಯೂ ರಾಯಲ್ ಎನ್ ಫೀಲ್ಡ್ ಅಂದ್ರೆ ಕೇಳಬೇಕಾ. ಜನರು ಕಿವಿ ಮುಚ್ಚಿಕೊಳ್ಳುವಷ್ಟರ ಮಟ್ಟಿಗೆ ಕರ್ಕಶ ಶಬ್ಧವಿರುತ್ತದೆ. ಹೀಗೆ ಜನರಿಗೆ ಕಿರಿಕಿರಿ ಉಂಟು ಮಾಡುವವರಿಗೆ ದಾವಣಗೆರೆ ಪೊಲೀಸ್ ಮತ್ತು ಸಾರಿಗೆ ಇಲಾಖೆ ಅಧಿಕಾರಿಗಳು ತಕ್ಕ ಪಾಠ ಕಲಿಸಿದ್ದಾರೆ.
ಕ್ರೇಜ್ಗೋಸ್ಕರ ಈಗೀಗಂತೂ ಯುವಕರು ಢಿಫರೆಂಟ್ ಬೈಕ್ಗಳನ್ನು ಖರೀದಿಸುವ ಗೀಳು ಅಂಟಿಸಿಕೊಳ್ಳುತ್ತಿದ್ದಾರೆ. ಮಾತ್ರವಲ್ಲ ಬೈಕ್ಗಳ ವೇಗದ ಮಿತಿಯಂತೂ ಹೇಳತೀರದಾಗಿದೆ. ಜೊತೆಗೆ ಶಬ್ಧ ಮಾಲಿನ್ಯ ಬೇರೆ. ಇದೆಲ್ಲಾ ಜನರಿಗೆ ಸಮಸ್ಯೆ ಉಂಟು ಮಾಡುತ್ತಿದ್ದರೂ ಯುವಕರು ಮಾತ್ರ ಕ್ಯಾರೆ ಎನ್ನದೇ ಚಿತ್ರ ವಿಚಿತ್ರ ಶಬ್ದ ಮಾಡುತ್ತಾ ಬೈಕ್ ಓಡಿಸುತ್ತಾರೆ. ಈ ಬಗ್ಗೆ ಹಲವು ಬಾರಿ ಪೊಲೀಸರಿಗೆ ಮತ್ತು ಸಾರಿಗೆ ಇಲಾಖೆ ಅಧಿಕಾರಿಗಳಿಗೆ ದೂರನ್ನು ಕೊಡಲಾಗಿತ್ತು. ಆದರೂ ಯುವಪೀಳಿಗೆ ಸೊಪ್ಪು ಹಾಕಿರಲಿಲ್ಲ. ಇದನ್ನು ಮನಗಂಡ ಅಧಿಕಾರಿಗಳು ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಮುಂದಾಗಿದ್ದಾರೆ.
ಪೋಲಿ ಹುಡುಗರಿಗೆ ಅಧಿಕಾರಿಗಳ ಪಾಠ ಈ ಬಗ್ಗೆ ಹದ್ದಿನ ಕಣ್ಣಿಟ್ಟಿದ್ದ ಸಾರಿಗೆ ಇಲಾಖೆ ಮತ್ತು ಸಂಚಾರಿ ಪೊಲೀಸರು ಜಂಟಿಯಾಗಿ ಅನವಶ್ಯಕವಾಗಿ ಸೈಲೆನ್ಸರ್ ಹಾಕಿಕೊಂಡ ಬೈಕ್ ಗುರುತಿಸಿ ತಪಾಸಣೆ ನಡೆಸಿದರು. ಅಷ್ಟೇ ಅಲ್ಲ, ಸೈಲೆನ್ಸರ್ಗಳನ್ನು ವಶಕ್ಕೆ ಪಡೆದು ಅವುಗಳನ್ನು ಒಂದೆಡೆ ಹಾಕಿದ್ದಾರೆ. ಅವುಗಳ ಮೇಲೆ ಜೆಸಿಬಿ ಹರಿಸುವ ಮೂಲಕ ನಾಶಪಡಿಸಿದ್ದಾರೆ. ಈ ಮೂಲಕವಾದರೂ ಸಾರ್ವಜನಿಕರಿಗೆ ತೊಂದರೆ ಮಾಡುವ ಕಿಡಿಗೇಡಿಗಳು ಬುದ್ಧಿ ಕಲಿಯುತ್ತಾರೆ ಎಂಬ ಕಾರಣಕ್ಕಾಗಿ ಈ ಕಠಿಣ ಕ್ರಮಕ್ಕೆ ಬರಲಾಗಿದೆ ಎನ್ನುತ್ತಾರೆ ಸಾರಿಗೆ ಇಲಾಖೆ ಅಧಿಕಾರಿಗಳು.
ಇನ್ನು ಸಾರಿಗೆ ಅಧಿಕಾರಿಗಳು ಮತ್ತು ಸಂಚಾರಿ ಪೊಲೀಸರು ತೆಗೆದುಕೊಂಡಿರುವ ಈ ನಿರ್ಧಾರಕ್ಕೆ ಸಾರ್ವಜನಿಕ ವಲಯದಲ್ಲಿ ಶ್ಲಾಘನೆ ವ್ಯಕ್ತವಾಗಿದೆ. ನಗರದಲ್ಲಿ ವೃದ್ಧರು, ಮಕ್ಕಳು ಸೇರಿದಂತೆ ಎಲ್ಲರಿಗೂ ಇಂತಹ ಸೈಲೆನ್ಸರ್ ಬಳಸಿ ಹಾರ್ನ್ ಮಾಡುತ್ತಿದ್ದರಿಂದ ತೊಂದರೆಯಾಗುತ್ತಿತ್ತು. ವಾಯು ಮಾಲಿನ್ಯ, ಶಬ್ದ ಮಾಲಿನ್ಯ ಆಗುತ್ತಿತ್ತು. ಅಷ್ಟೇ ಅಲ್ಲ, ಅಪಘಾತಕ್ಕೂ ಇದು ದಾರಿಯಾಗಿತ್ತು. ಇದಕ್ಕೆ ಕಡಿವಾಣ ಹಾಕಲು ಪೊಲೀಸರು ತೆಗೆದುಕೊಂಡಿರುವ ಕ್ರಮ ಒಳ್ಳೆಯದು ಎಂದು ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.