ದಾವಣಗೆರೆ: ಸದ್ಯ ಅಡಕೆಗೆ ಚಿನ್ನದ ಬೆಲೆ ಇರುವುದರಿಂದ ದಾವಣಗೆರೆಯ ಶೇ 50ರಷ್ಟು ರೈತರು ಅಡಕೆ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ಕಷ್ಟಪಟ್ಟು ಅಡಕೆ ಬೆಳೆದಿರುವ ರೈತರು, ಫಸಲನ್ನು ಉಳಿಸಿಕೊಳ್ಳುವುದೇ ಸವಾಲಿನ ಕೆಲಸವಾಗಿದೆ.
ಅಡಕೆ ಕಳ್ಳತನ ಪ್ರಕರಣಗಳು ಜಿಲ್ಲೆಯಲ್ಲಿ ಹೆಚ್ಚಾಗುತ್ತಿದ್ದರಿಂದ ರೈತರಿಗೆ ಅಡಕೆ ಕಾಯುವುದೇ ಒಂದು ಕೆಲಸವಾಗಿದೆ. ಆದರೇ ರೈತರಿಗೆ ಎಸ್ಪಿಯವರು ಕೂಡ ಒಂದೊಳ್ಳೆ ಉಪಾಯ ನೀಡಿದ್ದು, ಅದನ್ನು ರೈತರು ಚಾಚುತಪ್ಪದೇ ಪಾಲಿಸುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಚನ್ನಗಿರಿಯಲ್ಲೇ ಅತಿ ಹೆಚ್ಚು ಅಡಕೆ ಬೆಳೆಯುತ್ತಿದ್ದರಿಂದ ಚನ್ನಗಿರಿಯನ್ನು ಅಡಕೆ ನಾಡು ಎಂದು ನಾಮಕರಣ ಮಾಡಲಾಗಿದೆ.
ಇಲ್ಲಿಯ ಕೆಂಪು ಅಡಕೆಗೆ ದೇಶದಲ್ಲಿ ಮಾತ್ರವಲ್ಲದೇ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸಹ ಪ್ರಸಿದ್ದಿ ಪಡೆದಿದೆ. ಅಡಕೆ ಇಲ್ಲಿನ ರೈತರ ವಾಣಿಜ್ಯ ಬೆಳೆಯಾಗಿದೆ. ಇತ್ತೀಚಿಗೆ ಹೆಚ್ಚು ಅಡಕೆ ಬೆಳೆ ಪ್ರಸಿದ್ಧಿಗೆ ಬಂದಿದೆ. ಕಾರಣ 2010ರಲ್ಲಿ ಪ್ರತಿ ಕ್ವಿಂಟಾಲ್ ಅಡಕೆಗೆ ಕೇವಲ ಹತ್ತು ಸಾವಿರ ರೂಪಾಯಿಯಿಂದ 15 ಸಾವಿರ ರೂಪಾಯಿ ದರವಿತ್ತು. ಇದಾದ ನಾಲ್ಕು ವರ್ಷಗಳಲ್ಲಿ ಅಂದ್ರೆ 2014 ರಲ್ಲಿ ಅಡಕೆ ಬೆಲೆ ಕೇಳಿ ರೈತರೇ ಬೆಚ್ಚಿ ಬಿದ್ದಿದ್ದರು. ಕಾರಣ ಒಂದು ಕ್ವಿಂಟಾಲ್ ಅಡಿಕೆಗೆ 99 ಸಾವಿರದಿಂದ ಒಂದು ಲಕ್ಷ ರೂಪಾಯಿ ದರ ಸಿಕ್ಕಿತ್ತು.
ಇದನ್ನೆ ನೋಡಿ ಬಹುತೇಕ ರೈತರು ಅಡಿಕೆ ಬೆಳೆಯ ಮೊರೆ ಹೋಗಿದ್ದಾರೆ. ಈ ಹಿಂದೆ ರಾಜ್ಯದಲ್ಲಿ ಎರಡು ಲಕ್ಷ ಟನ್ ಅಡಕೆ ಉತ್ಪಾದನೆ ಇತ್ತು. ಇದೀಗ ಕಳೆದ ಐದಾರು ವರ್ಷದಲ್ಲಿ ರಾಜ್ಯದಲ್ಲಿ ಬರೋಬರಿ ನಾಲ್ಕು ಲಕ್ಷ ಟನ್ ಅಡಕೆ ಉತ್ಪಾದನೆ ಆಗುತ್ತದೆ. 2018ರಲ್ಲಿ ದರ ಕಡಿಮೆ ಆಗಿದ್ದು, ಪ್ರತಿ ಕ್ವಿಂಟಾಲ್ಗೆ 33 ರಿಂದ 34 ಸಾವಿರ ದರವಿತ್ತು. ಪ್ರಸ್ತುತ ಅಡಿಕೆಗೆ 50 ರಿಂದ 55 ಸಾವಿರ ರೂಪಾಯಿ ದರ ನಡೆದಿದೆ. ಅಡಕೆ ಬೆಳೆ ಕಡಿಮೆ ಇರುವ ಕಾರಣಕ್ಕೆ ಅಡಕೆಗೆ ಭಾರೀ ಬೆಲೆ ಬಂದಿದೆ.