ದಾವಣಗೆರೆ:ಕಳೆದ ರಾತ್ರಿಯಿಂದ ಸುರಿಯುತ್ತಿರುವ ನಿರಂತರ ಮಳೆಗೆ ಚನ್ನಗಿರಿ ತಾಲೂಕಿನ ಜನ ತತ್ತರಿಸಿ ಹೋಗಿದ್ದಾರೆ. ವಿಪರೀತ ಮಳೆ ಬಿದ್ದಿದ್ದರಿಂದ ಮಳೆ ನೀರು ಮನೆ ಹಾಗೂ ತೋಟಕ್ಕೆ ನುಗ್ಗಿದೆ. ಮನೆಗೆ ನುಗ್ಗಿದ ನೀರನ್ನು ಹೊರ ಹಾಕಲು ಗ್ರಾಮಸ್ಥರು ಹರಸಾಹಸ ಪಟ್ಟಿದ್ದಾರೆ.
ಜಿಲ್ಲೆಯ ಚನ್ನಗಿರಿ ತಾಲೂಕಿನ ಮಲಹಾಳ್ ಗ್ರಾಮದಲ್ಲಿ 50ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಸಂಜೆಯಾಗುತ್ತಿದ್ದಂತೆ ಮಳೆ ಹೆಚ್ಚಾದ ಪರಿಣಾಮ ಹಳ್ಳದ ಮೂಲಕ ಅಪಾರ ಪ್ರಮಾಣದ ನೀರು ಗ್ರಾಮಕ್ಕೆ ಹರಿದು ಬಂದಿದ್ದರಿಂದ ಗ್ರಾಮಸ್ಥರು ಸಂಕಷ್ಟ ಅನುಭವಿಸುವಂತಾಗಿದೆ.
ದಾವಣಗೆರೆಯಲ್ಲಿ ನಿರಂತರ ಮಳೆ: ಮನೆ, ತೋಟಕ್ಕೆ ನುಗ್ಗಿದ ಹಳ್ಳದ ನೀರು ಕೆರೆ ಕೋಡಿ ಬಿದ್ದು ಗ್ರಾಮಕ್ಕೆ ನುಗ್ಗಿದ ನೀರು:ಜಿಲ್ಲೆಯ ಹೊನ್ನಾಳಿ ಹಾಗೂ ನ್ಯಾಮತಿ ತಾಲೂಕುಗಳಲ್ಲಿಯೂ ಮಳೆ ಮುಂದುವರೆದಿದೆ. ನ್ಯಾಮತಿ ತಾಲೂಕಿನ ಯರಗನಾಳು ಗ್ರಾಮದ ರಸ್ತೆಗಳು ರಾಜಕಾಲುವೆಗಳಂತಾಗಿವೆ. ಕೆರೆ ನೀರು ಭೋರ್ಗರೆಯುತ್ತಿದ್ದರಿಂದ ಸಂಪೂರ್ಣ ಗ್ರಾಮ ಜಲಾವೃತವಾಗಿವೆ.
ನಿರಂತರ ಮಳೆಯಿಂದ ಕೋಡಿ ಬಿದ್ದಿರುವ ಯರಗನಾಳು ಬಳಿಯ ಗೌಡನ ಕೆರೆಯ ನೀರು ಅವಾಂತರ ಸೃಷ್ಟಿಸಿದೆ. ಈ ಹಿಂದೆ ಗೌಡನಕೆರೆ ಒಂದು ಬಾರಿ ಕೋಡಿ ಬಿದ್ದಿತ್ತು. ಇದೀಗ ಎರಡನೇ ಬಾರಿಗೆ ಕೋಡಿ ಬಿದ್ದಿರುವುದ್ದರಿಂದ ಸಮಸ್ಯೆ ಸೃಷ್ಟಿಯಾಗಿದೆ.
ಇದನ್ನೂ ಓದಿ:ದಾವಣಗೆರೆಯಲ್ಲಿ ಧಾರಾಕಾರ ಮಳೆ: ಜನಜೀವನ ಅಸ್ತವ್ಯಸ್ತ