ದಾವಣಗೆರೆ: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ. ಮುಂದಿನ ಎರಡೂವರೆ ವರ್ಷ ಯಡಿಯೂರಪ್ಪ ಸಿಎಂ ಆಗಿ ಮುಂದುವರಿಯಲಿದ್ದಾರೆ. ಎಲ್ಲಿಯೂ ನಾಯಕತ್ವ ಬದಲಾವಣೆ ಬಗ್ಗೆ ಚರ್ಚೆ ಆಗಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮತ್ತೆ ಸ್ಪಷ್ಟನೆ ನೀಡಿದ್ದಾರೆ.
ದಾವಣಗೆರೆಯ ಅಪೂರ್ವ ರೆಸಾರ್ಟ್ನಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಸರ್ಕಾರ ಹಾಗೂ ಸಂಘಟನೆ ವಿಚಾರದಲ್ಲಿ ಯಾವುದೇ ಗೊಂದಲ ಇಲ್ಲ. ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ. ಕೇಂದ್ರದ ಅಣತಿಯಂತೆ ಕೆಲಸ ಮಾಡಿಕೊಂಡು ಹೋಗುತ್ತಿದ್ದೇವೆ. ಸಹಜವಾಗಿಯೇ ಸಿಎಂ ಅವರನ್ನು ಆಗಾಗ್ಗೆ ಭೇಟಿ ಮಾಡುತ್ತಿರುತ್ತೇವೆ. ಅದರಲ್ಲಿ ಅಪಾರ್ಥ ಕಲ್ಪಿಸುವುದು ಬೇಡ ಎಂದು ತಿಳಿಸಿದರು.
ಸದ್ಯದಲ್ಲಿಯೇ ಸಚಿವ ಸಂಪುಟ ವಿಸ್ತರಣೆ ಆಗಲಿದೆ. ಸಿಎಂ ಯಡಿಯೂರಪ್ಪ, ಪಕ್ಷದ ಹೈಕಮಾಂಡ್ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿದೆ. ಯಾರ್ಯಾರಿಗೆ ಸಚಿವ ಸ್ಥಾನವನ್ನು ನೀಡಬೇಕೆಂಬುದು ವರಿಷ್ಠರದ್ದೇ ಅಂತಿಮ ತೀರ್ಮಾನ ಆಗಿರಲಿದೆ. ಭೌಗೋಳಿಕ, ವಿಸ್ತೀರ್ಣ, ಸಾಮಾಜಿಕ, ಆರ್ಥಿಕತೆ ಸೇರಿ ಎಲ್ಲ ಅಂಶಗಳನ್ನು ಒಳಗೊಂಡಂತೆ ಪ್ರಾಧಾನ್ಯತೆ ಆಧರಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
ಇದನ್ನೂ ಓದಿ:ಸಚಿವ ಸಂಪುಟ ವಿಸ್ತರಣೆ ವಿಚಾರ: ಕಟೀಲ್ ಭೇಟಿಯಾದ ಮೂಡಿಗೆರೆ ಶಾಸಕ
ಮರಾಠ ಸಮುದಾಯ ಪ್ರಾಧಿಕಾರ ರಚನೆ ವಿರೋಧಿಸಿ ಡಿಸೆಂಬರ್ 5 ರಂದು ಕನ್ನಡಪರ ಸಂಘಟನೆಗಳು ಕರೆ ನೀಡಿರುವ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳಲಿದೆ. ಬೇಡಿಕೆ ಇದ್ದ ಕಾರಣ ವೀರಶೈವ ಲಿಂಗಾಯತ ಪ್ರಾಧಿಕಾರ ರಚನೆ ಮಾಡಲಾಗಿದೆ ಎಂದು ನಳೀನ್ ಕುಮಾರ್ ಕಟೀಲ್ ತಿಳಿಸಿದರು.
ಪ್ರಕೋಷ್ಠಗಳ ಸಭೆಯಲ್ಲಿ ಕೈ ವಿರುದ್ಧ ಹರಿಯಾಯ್ದ ಕಟೀಲ್...
ಅಧಿಕಾರ ಪಡೆದುಕೊಳ್ಳುವುದು ಕಾಂಗ್ರೆಸ್ ಕಾರ್ಯಕರ್ತರ ಗುರಿಯಾಗಿದೆ. ಬಿಜೆಪಿ ಕಾರ್ಯಕರ್ತರ ಗುರಿ ಭವ್ಯ ಭಾರತ ನಿರ್ಮಾಣವಾಗಿದೆ. ಪ್ರಕೋಷ್ಠಗಳ ಪರಿಕಲ್ಪನೆ ಮೊದಲು ಆಗಿದ್ದೇ ಕರ್ನಾಟಕದಲ್ಲಿ. ರಾಜ್ಯದಲ್ಲಿ 90 ಸಾವಿರ ಕಾರ್ಯಕರ್ತರಿಗೆ ಪ್ರಕೋಷ್ಠಗಳ ಜವಾಬ್ದಾರಿ ನೀಡಲಾಗಿದೆ. ನಮ್ಮಲ್ಲಿ ವ್ಯಕ್ತಿಗಿಂತ ಪಕ್ಷ ಶ್ರೇಷ್ಠ, ಪಕ್ಷಕ್ಕಿಂತ ದೇಶ ಶ್ರೇಷ್ಠ ಎಂಬ ನಿಯಮ ಇದೆ ಎಂದು ಹೇಳಿದರು.
ಇದನ್ನೂ ಓದಿ:ದೇಶದ ಹಳ್ಳಿಗಳ ಮನೆ- ಮನೆಗೂ ಅಂತರ್ಜಾಲ ಸಂಪರ್ಕ: ಕಟೀಲ್
ಹಿಂದೆ ಕರೆಂಟ್ ಕಂಬ ನಿಲ್ಲಿಸಿದರೆ ಕಾಂಗ್ರೆಸ್ ಪಕ್ಷ ಗೆಲ್ಲುತ್ತದೆ ಎಂದು ಹೇಳಿದ್ದರು. ಆದರೆ ಈಗ ವಿರೋಧ ಪಕ್ಷವಾಗುವುದಕ್ಕೂ ನಾಲಾಯಕ್ ಆಗಿದೆ. ದೇಶದಲ್ಲೇ ಅತಿ ಹೆಚ್ಚು ಶಾಸಕರನ್ನು, ಸಂಘಟನೆಯನ್ನು ಬಿಜೆಪಿ ಹೊಂದಿದೆ. ಕಾಂಗ್ರೆಸ್ ಅಧಿಕಾರ ಸಿಕ್ಕಾಗ ಭ್ರಷ್ಟಾಚಾರ, ಕುಟುಂಬ ರಾಜಕಾರಣ ಮಾಡಿತು. ಕಾಂಗ್ರೆಸ್ ಪಕ್ಷ ಬಡವರ ಬಗ್ಗೆ ಕಾಳಜಿ ಮೆರೆಯಿತು. ಇದರಿಂದಾಗಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸೋತಿದೆ. ಬಿಜೆಪಿ ಅಧಿಕಾರ ಇಲ್ಲದಿದ್ದರೂ ಸಂಘಟನೆ, ದೇಶದ ಬಗ್ಗೆ ಪರಿಕಲ್ಪನೆ ಮಾಡಿದ್ದರಿಂದ ಬಿಜೆಪಿ ಗೆಲುವು ಸಾಧಿಸಿತು ಎಂದು ಕಾಂಗ್ರೆಸ್ ವಿರುದ್ದ ಸಭೆಯಲ್ಲಿ ಕಟೀಲ್ ಹರಿಹಾಯ್ದರು.