ದಾವಣಗೆರೆ:ಕೇಂದ್ರ ಸರ್ಕಾರದ ಬಜೆಟ್ನಲ್ಲಿ ಕೃಷಿ ಹಾಗೂ ಮಾರುಕಟ್ಟೆ ಬಗ್ಗೆ ರೈತರು ವಿಶ್ವಾಸವಿಡುವ ಕೆಲಸ ಆಗಿಲ್ಲ ಎಂದು ಕಬ್ಬು ಬೆಳೆಗಾರರ ಸಂಘದ ರಾಜ್ಯ ಉಪಾಧ್ಯಕ್ಷ ತೇಜಸ್ವಿ ಪಟೇಲ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ 'ಈಟಿವಿ ಭಾರತ' ಜೊತೆ ಮಾತನಾಡಿದ ಅವರು, ನರೇಂದ್ರ ಮೋದಿಯವರಿಗೆ ಎರಡನೇ ಭಾರಿ ಜನಾದೇಶ ಸಿಕ್ಕಿದೆ. ಜನರ ನಿರೀಕ್ಷೆ ಪ್ರಮಾಣ ದೊಡ್ಡದಿದೆ. ಮೊದಲು ಬಜೆಟ್ನಲ್ಲಿ ಕೃಷಿ ಆದಾಯ ದ್ವಿಗುಣ ಮಾಡುತ್ತೇವೆ ಎಂದಿದ್ದರು. ಆದರೆ ಐದು ವರ್ಷ ಕಳೆದರು ಏನು ಆಗಿಲ್ಲ. ಈಗ ಮತ್ತೊಮ್ಮೆ ಅಧಿಕಾರಕ್ಕೆ ಬಂದಿದ್ದು, ಮೊದಲ ಬಜೆಟ್ನಲ್ಲಿ 2022ಕ್ಕೆ ಕೃಷಿ ಆದಾಯ ದ್ವಿಗುಣ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ. ಇದು ಎಷ್ಟರ ಮಟ್ಟಿಗೆ ಸಾದ್ಯವಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ ಎಂದು ವ್ಯಂಗ್ಯವಾಡಿದರು.
ಕೃಷಿಕರಿಗೆ ತಾಂತ್ರಿಕತೆ ಅಗತ್ಯವಿಲ್ಲ. ಮಾರುಕಟ್ಟೆ ವಿಷಯದಲ್ಲಿ ಬೆಳೆಗಳ ಬೆಲೆ ಕುಸಿದಾಗ ಸರ್ಕಾರ ಮಧ್ಯ ಪ್ರವೇಶಿಸಿ ಆವರ್ತ ನಿಧಿ ಸ್ಥಾಪಿಸುವಂತಹ ಕೆಲಸ ಆಗಬೇಕಿತ್ತು. ಆದರೆ ಕೃಷಿ ಹಾಗೂ ಮಾರುಕಟ್ಟೆ ಬಗ್ಗೆ ವಿಶ್ವಾಸವಿಡುವಂತಹ ಕೆಲಸ ಮಾಡಿಲ್ಲ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯನ್ನುವ ದೊಡ್ಡ ಯೋಜನೆ ಎಂದು ಬಿಂಬಿಸಲಾಗಿದೆ. ಆದರೆ ಇದು ರೈತರ ಸ್ಥಿತಿ ಅಣಕಿಸುವಂತಿದೆ ಎಂದರು.