ಹರಿಹರ(ದಾವಣಗೆರೆ):ಇಲ್ಲಿನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಕ್ಯಾಂಟೀನ್ ಬಂದ್ ಆಗಿದ್ದು, ನಿತ್ಯ ಪ್ರಯಾಣ ಮಾಡುವವರಿಗೆ ತೀವ್ರ ತೊಂದರೆಯಾಗಿದೆ ಎಂದು ಪ್ರಯಾಣಿಕರು ಬೇಸರ ವ್ಯಕ್ತಪಡಿಸಿದ್ದಾರೆ.
ಹರಿಹರ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಇಲ್ಲ ಕ್ಯಾಂಟೀನ್ ವ್ಯವಸ್ಥೆ.. 1400 ರಿಂದ 1450 ಬಸ್ಗಳು ಹರಿಹರ ಕೆಎಸ್‌ಆರ್‌ಟಿಸಿ ನಿಲ್ದಾಣದಿಂದ ನಿತ್ಯ ಸಂಚರಿಸುತ್ತವೆ. ಸುಮಾರು 50 ಸಾವಿರ ಪ್ರಯಾಣಿಕರು ಮತ್ತು 5 ರಿಂದ 6 ಸಾವಿರ ವಿದ್ಯಾರ್ಥಿಗಳು ನಿತ್ಯ ಈ ನಿಲ್ದಾಣಕ್ಕೆ ಬಂದು ಹೋಗುತ್ತಾರೆ. ಆದರೂ ಇಲ್ಲಿ ಕ್ಯಾಂಟೀನ್ ವ್ಯವಸ್ಥೆ ಇಲ್ಲ.
ಕಳೆದ ಫೆಬ್ರವರಿಯಿಂದ ಕ್ಯಾಂಟೀನ್ ಬಂದ್ ಆಗಿದ್ದು, ಕ್ಯಾಂಟೀನ್ ಗುತ್ತಿಗೆದಾರರು ಅಧಿಕ ಬಾಡಿಗೆ ಹಣ ಕಟ್ಟಲಾಗದೆ ಬಿಟ್ಟುಕೊಟ್ಟಿದ್ದಾರೆ. ದಿನಕ್ಕೆ 50 ಸಾವಿರ ಪ್ರಯಾಣಿಕರಿಗೆ ಉಪಹಾರ ಒದಗಿಸುವ ನಿಲ್ದಾಣದಲ್ಲಿನ ಕ್ಯಾಂಟೀನ್ ನಡೆಸುವವರನ್ನು ಬಿಡಿಸುವ ಮುನ್ನ ಪ್ರಯಾಣಿಕರ ಹಿತ ಬಯಸುವ ಸಂಸ್ಥೆ ಬದಲಿಗೆ ತಾತ್ಕಾಲಿಕ ವ್ಯವಸ್ಥೆ ಮಾಡದೇ ಇರುವುದು ಸಂಸ್ಥೆಯವರ ಕರ್ತವ್ಯ ಲೋಪ ತೊರಿಸುತ್ತಿದೆ.
ಪ್ರಯಾಣಿಕರ ಜೇಬಿಗೆ ಕತ್ತರಿ:ಪ್ರಯಾಣಿಕರು ನಿಲ್ದಾಣದಲ್ಲಿ ಕ್ಯಾಂಟೀನ್ ಸ್ಥಗಿತ ಆಗಿರುವುದರಿಂದ ಬಸ್ ಚಾಲಕರು ತಮಗೆ ಸರಿ ಎನಿಸಿದ ಡಾಬಾಗಳಲ್ಲಿ ಹೆಚ್ಚಿನ ಹಣವನ್ನು ನೀಡಿ ಅವರು ಕೊಟ್ಟಿದ್ದನ್ನೇ ತಿನ್ನುವ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ಮೇಲಾದರೂ ಈ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುತ್ತಾ ಎಂದು ಕಾದು ನೋಡಬೇಕು.