ಹರಿಹರ: ನಗರದ ಕೆ.ಎಚ್.ಬಿ ಕಾಲೋನಿಗೆ ಅಗತ್ಯ ಸೌಲಭ್ಯವೇ ಇಲ್ಲದ ಪರಿಣಾಮ ಕಾಲೋನಿ ಸ್ಥಿತಿ ಅಯೋಮಯವಾಗಿದ್ದು, ಇಲ್ಲಿನ ನಿವಾಸಿಗಳಿಂದ ಟ್ಯಾಕ್ಸ್ ಮಾತ್ರ ಕಟ್ಟಿಸಿಕೊಂಡು ಸೌಲಭ್ಯಗಳನ್ನು ಮಾತ್ರ ಕೇಳಬೇಡಿ ಎಂಬ ನಗರಸಭೆಯ ಧೋರಣೆ ಬಗ್ಗೆ ನಿವಾಸಿಗಳಿಂದ ಆಕ್ರೋಶ ವ್ಯಕ್ತವಾಗುತ್ತಿದೆ.
ಹರಿಹರದ ಅಮರಾವತಿ ಕಾಲೋನಿಗೆ ಹೊಂದಿಕೊಂಡಿರುವ ಕೆಎಚ್‌ಬಿ ಹೌಸಿಂಗ್ ಕಾಲೋನಿಯನ್ನು ಕಳೆದ 10 ವರ್ಷಗಳ ಹಿಂದೆ ಸರ್ಕಾರ ನಿರ್ಮಾಣ ಮಾಡಿ ರಸ್ತೆ, ಚರಂಡಿ, ಒಳ ಚರಂಡಿ, ಪಾರ್ಕ್, ವಿದ್ಯುತ್ ದೀಪ ಅಳವಡಿಸಿ ನಂತರ ಹರಾಜು ಮೂಲಕ ಜನರಿಗೆ ಸೈಟುಗಳನ್ನು ವಿತರಣೆ ಮಾಡಲಾಯಿತು. ನಂತರ ಹೌಸಿಂಗ್ ಬೋರ್ಡ್ ಅಧಿಕಾರಿಗಳು ಕೆಎಚ್‌ಬಿ ಕಾಲೋನಿಯನ್ನು ನಗರಸಭೆಗೆ ಹಸ್ತಾಂತರ ಮಾಡಿದರು.
ಸೈಟು ಪಡೆದ ನೂರಾರು ಜನ ಮನೆ ನಿರ್ಮಾಣ ಮಾಡಿಕೊಂಡರು. ಸದ್ಯ ಅಂದಾಜು ನಾಲ್ಕು ನೂರಕ್ಕೂ ಅಧಿಕ ಮನೆಗಳನ್ನು ನಿರ್ಮಾಣ ಮಾಡಲಾಗಿದ್ದು, ಇನ್ನೂ ಕೆಲವರು ಮನೆಗಳನ್ನು ಕಟ್ಟುತ್ತಿದ್ದಾರೆ. ಇವರೆಲ್ಲರೂ ನಗರಸಭೆಗೆ ಕಂದಾಯವನ್ನು ತಪ್ಪದೇ ಕಟ್ಟುತ್ತಾ ಬರುತ್ತಿದ್ದಾರೆ. ಟ್ಯಾಕ್ಸ್ ಮಾತ್ರ ಕಟ್ಟಿಸಿಕೊಳ್ಳುವ ಅಧಿಕಾರಿಗಳು ನಮ್ಮ ಸಮಸ್ಯೆಗಳ ನಿವಾರಣೆಗೆ ಗಮನ ಹರಿಸುತ್ತಿಲ್ಲ ಎಂಬ ಅಸಮಾಧಾನ ವ್ಯಕ್ತವಾಗಿದೆ.