ದಾವಣಗೆರೆ: ಜಮೀನು ತೆಗೆದುಕೊಂಡರೆ ಆಯ್ತಾ, ಮಠ ಕಟ್ಟಬೇಕಲ್ವಾ ಎಂದು ಮಠ ಕಟ್ಟುವಾಗ ಕೆಲವರು ಗೇಲಿ ಮಾಡಿದ್ದರು ಎಂದು ಕನಕಗುರು ಪೀಠದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಹೇಳಿದ್ದಾರೆ. ಜಿಲ್ಲೆಯ ಹರಿಹರ ತಾಲೂಕಿನ ಬೆಳ್ಳೋಡಿಯ ಕನಕ ಗುರುಪೀಠದಲ್ಲಿ ನಡೆದ ಕೋಚಿಂಗ್ ಸೆಂಟರ್ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಠವನ್ನು ನಿರ್ಮಾಣ ಮಾಡುವಾಗ ಕೆಲವರು ಗೇಲಿ ಮಾಡಿದ್ದರು. ದೊಡ್ಡ ದೊಡ್ಡ ಸಮುದಾಯದವರೇ ಮಠ ಕಟ್ಟಲು ಹೋಗಿ ಅಡ್ಡ ಮಲಗಿದ್ದಾರೆ ಎಂದು ಹೇಳಿದ್ದರು. ಅವರು ಮಾಡಿದ ಅಪಹಾಸ್ಯದಿಂದ ನಮಗೆ ಮಠ ಕಟ್ಟಲು ಸಾಧ್ಯವಾಗಿದೆ. ಮಠ ಕಟ್ಟಿದ ವರ್ಷವೇ ನಮ್ಮ ಸಮಾಜದವರನ್ನು ಶಾಸಕರನ್ನಾಗಿ ಮಾಡಿದ್ದೇವೆ ಎಂದು ಹೇಳಿದರು.
ಈಗ ಕೆಎಎಸ್, ಐಪಿಎಸ್ ಕೋಚಿಂಗ್ ಸೆಂಟರ್ ಆರಂಭಿಸಲು ಹೊರಟಾಗಲೂ ಕೆಲವರು ಗೇಲಿ ಮಾಡಿದರು. ಇಂದು ಕಟ್ಟಡ ನಿರ್ಮಾಣ ಮಾಡಿ ಸಿದ್ದರಾಮಯ್ಯನವರ ಕೈಯಲ್ಲಿ ಉದ್ಘಾಟನೆ ಮಾಡಿಸಿದ್ದೇವೆ. ಸುಮಾರು ಐದು ಲಕ್ಷ ಜನರನ್ನು ಸೇರಿಸಿ ಉದ್ಘಾಟನೆ ಮಾಡಿಸಿದ್ದೇವೆ ಎಂದು ಸ್ವಾಮೀಜಿ ಹೇಳಿದರು. ಈ ಕೋಚಿಂಗ್ ಸೆಂಟರ್ ಬಗ್ಗೆ ಒಬ್ಬ ಮುಖಂಡ ತೀಕ್ಷ್ಣವಾಗಿ ಮಾತನಾಡಿದ್ದರು. ಇಲ್ಲಿ ಕೋಚಿಂಗ್ ಸೆಂಟರ್ ಮಾಡಿದ್ದು ನಿಮ್ಮ ಮೂರ್ಖತನ ಎಂದು ಹೇಳಿದ್ದರು. ಅದಕ್ಕೆ ಇಂದು ಕೋಚಿಂಗ್ ಸೆಂಟರ್ ಆರಂಭಿಸಿ ಉತ್ತರ ಕೊಟ್ಟಿದ್ದೇವೆ. ಇದು ಎಲ್ಲಿಯವರೆಗೂ ಎಂದರೆ ಇಲ್ಲಿನ ವಿದ್ಯಾರ್ಥಿಗಳು ದೊಡ್ಡ ದೊಡ್ಡ ಅಧಿಕಾರಿಗಳಾಗುವರೆಗೂ ಇದು ನಿಲ್ಲುವುದಿಲ್ಲ ಎಂದು ಗೇಲಿ ಮಾಡಿದವರಿಗೆ ಸ್ವಾಮೀಜಿ ತೀಕ್ಷ್ಣವಾಗಿ ಹೇಳಿದರು.
ಓದಿ :ನಾಳೆಯಿಂದ ಸಂಪೂರ್ಣವಾಗಿ ತ್ಯಾಜ್ಯ ವಿಲೇವಾರಿ ಸ್ಥಗಿತ: ಪೌರಕಾರ್ಮಿಕರ ಎಚ್ಚರಿಕೆ