ದಾವಣಗೆರೆ: ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡಿ ಮಂತ್ರಿ ಸ್ಥಾನದಿಂದ ತೆಗೆದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆಳ್ಳೂಡಿಯ ಕನಕ ಗುರುಪೀಠದ ಶಾಖಾ ಮಠಾಧಿಪತಿ ನಿರಂಜನಾನಂದಪುರಿ ಶ್ರೀಗಳು ಜಿಲ್ಲೆಯ ಬಿಜೆಪಿ ಶಾಸಕರಿಗೆ ಎಚ್ಚರಿಕೆ ನೀಡಿದ್ದಾರೆ.
ಮಂತ್ರಿ ಸ್ಥಾನದಿಂದ ಭೈರತಿ ತೆಗೆದರೆ ಪರಿಣಾಮ ನೆಟ್ಟಗಿರದು: ನಿರಂಜನಾನಂದ ಶ್ರೀಗಳ ಖಡಕ್ ಎಚ್ಚರಿಕೆ
ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡಿ ಮಂತ್ರಿ ಸ್ಥಾನದಿಂದ ತೆಗೆದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ನಿರಂಜನಾನಂದಪುರಿ ಶ್ರೀಗಳು ಜಿಲ್ಲೆಯ ಬಿಜೆಪಿ ಶಾಸಕರಿಗೆ ಎಚ್ಚರಿಕೆ ನೀಡಿದ್ದಾರೆ.
ಈ ಸಂಬಂಧ ಪೀಠದಲ್ಲಿ ಹೇಳಿಕೆ ನೀಡಿರುವ ಅವರು, ನೀವು ಬೇಕಾದರೆ ಸಚಿವರಾಗಿ, ಆದರೆ, ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಬಗ್ಗೆ ಇಲ್ಲ ಸಲ್ಲದ ಆರೋಪ ಮಾಡಬೇಡಿ. ಭೈರತಿ ಬದಲಾಯಿಸಲು ಯತ್ನಿಸಿದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತೆ. ನಾನೇ ನೇರವಾಗಿ ಎಚ್ಚರಿಕೆ ನೀಡುತ್ತಿದ್ದೇನೆ ಎಂದಿದ್ದಾರೆ.
ಸಚಿವ ಭೈರತಿ ಬಸವರಾಜ್ ಬಗ್ಗೆ ಗಂಭೀರ ಆರೋಪ ಮಾಡಿ ಮಂತ್ರಿಗಿರಿಯಿಂದ ತೆಗೆಸಿದರೆ ಸರಿ ಇರಲ್ಲ. ಇದು ನಾನು ದಾವಣಗೆರೆ ಜಿಲ್ಲೆಯ ಬಿಜೆಪಿ ಶಾಸಕರಿಗೆ ನೀಡುತ್ತಿರುವ ನೇರ ಎಚ್ಚರಿಕೆ. ಹೊನ್ನಾಳಿ ಶಾಸಕ ಎಂ. ಪಿ. ರೇಣುಕಾಚಾರ್ಯ ಮನೆಯಲ್ಲಿ ಭೈರತಿ ಬದಲಾಯಿಸುವ ಕುರಿತಂತೆ ಜಿಲ್ಲೆಯ ಬಿಜೆಪಿ ಶಾಸಕರು ಸಭೆ ನಡೆಸಿದ್ದಾರೆ ಎನ್ನಲಾಗಿದ್ದು, ಜಿಲ್ಲೆಯ ಒಬ್ಬರಿಗೆ ಸಚಿವ ಸ್ಥಾನ ನೀಡುವಂತೆ ಸಿಎಂ ಯಡಿಯೂರಪ್ಪ ಅವರಿಗೆ ಒತ್ತಡ ಹೇರಲು ನಿರ್ಧಾರ ಮಾಡಿದ್ದಾರೆ ಎನ್ನುವ ಹಿನ್ನೆಲೆಯಲ್ಲಿ ಶ್ರೀಗಳು ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ.