ದಾವಣಗೆರೆ: ದಾವಣಗೆರೆ ವಿಶ್ವವಿದ್ಯಾನಿಲಯದಲ್ಲಿ ಇಂದು ಒಂಬತ್ತನೇ ಘಟಿಕೋತ್ಸವ ಜರುಗಿತು. ಈ ಘಟಿಕೋತ್ಸವದಲ್ಲಿ ಜಿಲ್ಲೆಯ ಬಸವನಾಳು ಗ್ರಾಮದ ನಿವಾಸಿಯಾದ ಸ್ವಪ್ನ ಹಾಗೂ ಜಗಳೂರು ತಾಲೂಕಿನ ಲಿಂಗನಣ್ಣನ ಹಳ್ಳಿಯ ಶೃತಿ ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಂಡು ಗಮನ ಸೆಳೆದರು. ರಾಜ್ಯಪಾಲರಾದ ಥಾವರಚಂದ್ ಗೆಹ್ಲೋಟ್ ಇವರಿಗೆ ಚಿನ್ನದ ಪದಕಗಳನ್ನು ಪ್ರದಾನ ಮಾಡಿದ್ರು.
ಸ್ವಪ್ನ ಅವರು ಆಟೋ ಚಾಲಕನ ಮಗಳಾಗಿದ್ದು, ಎಂಬಿಎ ಪದವಿಯಲ್ಲಿ ಟಾಪರ್ ಆಗಿ ಐದು ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಇವರ ತಾಯಿ ಕಿರಾಣಿ ಅಂಗಡಿ ಇಟ್ಟುಕೊಂಡು ಜೀವನ ನಿರ್ವಹಣೆ ಮಾಡ್ತಿದ್ದಾರೆ. ಎಂಕಾಂ ತನಕ ಓದಿದ ಸ್ವಪ್ನಗೆ ಆರ್ಥಿಕ ಸಂಕಷ್ಟ ಹಿನ್ನೆಲೆ ಮುಂದೆ ಓದಲು ಆಗಲಿಲ್ಲ. ಹಾಗಾಗಿ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದರು. ಆದ್ರೆ ಇವರಿಗೆ ಕೆಲಸ ಮಾಡುವಾಗ ಬೇರೆಯವನ್ನು ನೋಡಿ ಓದಬೇಕೆನಿಸಿ, ಕೆಲಸದ ಜೊತೆಗೆ ಎಂಬಿಎ ಓದುತ್ತಾರೆ. ಇದೀಗ ಎಂಬಿಎಯಲ್ಲಿ ಟಾಪರ್ ಆಗಿ ಚಿನ್ನದ ಪದಕಗಳನ್ನು ಪಡೆದಿದ್ದಾರೆ. ಅಷ್ಟೇ ಅಲ್ಲದೇ ಕ್ಯಾಂಪಸ್ ಸೆಲೆಕ್ಷನ್ ಆಗಿದ್ದು, ಖಾಸಗಿ ಕಂಪನಿಯಲ್ಲಿ ಸ್ಟೋರ್ ಮ್ಯಾನೇಜರ್ ಕೆಲಸ ಮಾಡ್ತಿದ್ದಾರೆ.