ಹರಿಹರ: ಡೆಂಗ್ಯೂ ಜ್ವರದಿಂದ ರಕ್ಷಿಸಿಕೊಳ್ಳಲು ಮನೆ ಹಾಗೂ ಸುತ್ತಮುತ್ತಲಿನ ಪರಿಸರದಲ್ಲಿ ನೀರು ಶೇಖರಣೆ ಆಗದಂತೆ ನೋಡಿಕೊಳ್ಳಿ ಎಂದು ವೈದ್ಯಾಧಿಕಾರಿ ಡಾ. ಶಶಿಕಲಾ ಹೇಳಿದರು.
ತಾಲೂಕಿನ ಕೊಂಡಜ್ಜಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದ ರಾಷ್ಟ್ರೀಯ ಡೆಂಗ್ಯೂ ಮತ್ತು ವಿಶ್ವ ಮಲೇರಿಯಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಳೆಗಾಲ ಆರಂಭವಾಗಿದ್ದು ಮನೆಯ ಒಳ- ಹೊರಗೆ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು. ಮೇಲ್ಛಾವಣೆಯಲ್ಲಿರುವ ನೀರಿನ ತೊಟ್ಟಿಯನ್ನು ವಾರಕ್ಕೊಮ್ಮೆ ಸ್ವಚ್ಛಗೊಳಿಸಬೇಕು ಎಂದು ಸಲಹೆ ನೀಡಿದರು.
ಮನೆಯ ಸುತ್ತಲಿನ ಪರಿಸರದಲ್ಲಿ ಪಾಚಿ ನೀರು ಸಂಗ್ರಹವಾಗದಂತೆ ನೋಡಿಕೊಳ್ಳಬೇಕು. ಈಡಿಸ್ ಈಜಿಪ್ಟಿ ಎಂಬ ಹೆಣ್ಣು ಸೊಳ್ಳೆ ಕಡಿತದಿಂದ ಡೆಂಗ್ಯೂ ಹರಡುತ್ತದೆ. ಸೊಳ್ಳೆ ಖಚ್ಚಿದ 6 ದಿನಗಳ ನಂತರ ಜ್ವರದ ಪ್ರಾಥಮಿಕ ಲಕ್ಷಣಗಳು ಕಂಡು ಬರುತ್ತವೆ. ಸೊಳ್ಳೆಗಳ ಕಡಿತದಿಂದ ದೂರವಿರಲು ಸೊಳ್ಳೆ ಭತ್ತಿ, ಸೊಳ್ಳೆ ಪರದೆ ಹಾಗೂ ಬೇವಿನಸೊಪ್ಪಿನ ಹೊಗೆ ಹಾಕಬೇಕು ಎಂದರು.