ದಾವಣಗೆರೆ :2023ರ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ನಳೀನ್ ಕುಮಾರ್ ಕಟೀಲ್ ಅವರ ನೇತೃತ್ವದಲ್ಲಿ ಬಿಜೆಪಿ ಹೀನಾಯ ಸೋಲು ಕಂಡಿದೆ. ಹೀಗಾಗಿ ನೈತಿಕ ಹೊಣೆ ಹೊತ್ತು ಅವರು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಮಾಜಿ ಶಾಸಕ ಎಂ.ಪಿ. ರೇಣುಕಚಾರ್ಯ ವಾಗ್ದಾಳಿ ನಡೆಸಿದರು.
ದಾವಣಗೆರೆ ಜಿಲ್ಲೆಯ ಹೊನ್ನಾಳಿಯಲ್ಲಿಂದು ಸ್ವಪಕ್ಷದ ಅಧ್ಯಕ್ಷರ ವಿರುದ್ಧ ಆಕ್ರೋಶ ಹೊರಹಾಕಿದ ಅವರು, ಸ್ವಪಕ್ಷ ಹಾಗೂ ನಾಯಕರ ವಿರುದ್ಧ ಮಾತಾಡಿದವರ ವಿರುದ್ದ ಶಿಸ್ತು ಕ್ರಮ ಹಾಗೂ ನೋಟಿಸ್ ಎನ್ನುತ್ತಿದ್ದೀರಿ. ಕಳೆದ 15 ದಿನಗಳಿಂದ ಒಳ ಒಪ್ಪಂದ ಎಂದು ಪಕ್ಷದ ಅತಿರಥ ಮಹಾರಥ ಮುಖಂಡರು ಮಾತನಾಡಿದಾಗ ಏಕೆ ರಾಜ್ಯಾಧ್ಯಕ್ಷರು ಮಾತನಾಡಿಲ್ಲ. ಬಿ.ಎಸ್. ಯಡಿಯೂರಪ್ಪ ಸಿಎಂ ಆಗಿದ್ದಾಗ ಕೆಲವರು, ನಮ್ಮ ಪಕ್ಷದವರೇ ವಾಗ್ದಾಳಿ ನಡೆಸಿದರು. ಅವರ ವಿರುದ್ಧ ಶಿಸ್ತುಕ್ರಮ ಕೈಗೊಂಡಿದ್ದೀರಾ, ಯಡಿಯೂರಪ್ಪ ಪರ ಮಾತನಾಡಿದರೆ ಪಕ್ಷ ವಿರೋಧಿನಾ? ಎಂದು ಕಿಡಿಕಾರಿದರು.
ಇಂದಿನ ಯಾವ ನಾಯಕರೂ ಬಿಜೆಪಿ ಕಟ್ಟಿ ಬೆಳೆಸಿಲ್ಲ. ಯಡಿಯೂರಪ್ಪನವರು ಹೋರಾಟ, ಪಾದಯಾತ್ರೆಗಳು ಮೂಲಕ ಪಕ್ಷವನ್ನು ರಾಜ್ಯದಲ್ಲಿ ಬೆಳೆಸಿದ್ದಾರೆ. ಹಾಗಾಗಿ ಆತ್ಮಾವಲೋಕನ ಮಾಡಿಕೊಳ್ಳಬೇಕು. ರಾಜ್ಯಾಧ್ಯಕ್ಷರ ಬಗ್ಗೆ ನನಗೆ ಅಪಾರ ಗೌರವವಿದೆ ಎಂದರು.