ನಮಗೂ ಮಾತನಾಡುವುದಕ್ಕೆ ಬರುತ್ತದೆ, ಸುಮ್ಮನೆ ಇದ್ದೀವಿ ಅಂದರೆ ದೌರ್ಬಲ್ಯ ಅಲ್ಲ: ಯತ್ನಾಳ್ಗೆ ನಿರಾಣಿ ಟಾಂಗ್ ದಾವಣಗೆರೆ : ಶಾಸಕ ಯತ್ನಾಳ್ ಹೇಳಿಕೆಗೆ ಮನನೊಂದು ಸಚಿವ ಮುರಗೇಶ ನಿರಾಣಿ ಬಾವುಕರಾಗಿ ಕಣ್ಣೀರು ಹಾಕಿದರು. ಪಂಚಮಸಾಲಿ ಮಠದಲ್ಲಿ ಜರುಗುತ್ತಿರುವ ಹರಿಹರ ಜಾತ್ರೆಗೆ ತೆರಳುವ ಮುನ್ನ ಮಾತನಾಡುತ್ತಾ ಬಾವುಕರಾದ ಸಚಿವ ನಿರಾಣಿಯವರು ಜಯಮೃತ್ಯುಂಜ ಸ್ವಾಮೀಜಿ ಮೀಸಲಾತಿ ವಿಚಾರದಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಇದರಲ್ಲಿ ಎರಡು ಮಾತೆ ಇಲ್ಲ ಎಂದು ದಾವಣಗೆರೆಯಲ್ಲಿ ಗಂಭೀರವಾಗಿ ಆರೋಪ ಮಾಡಿದರು.
ಕಳೆದ ಕಾಂಗ್ರೆಸ್ ಸರ್ಕಾರ ಇದ್ದಾಗ ಅಂದಿನ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕಾಂತರಾಜ 2ಎ ಮೀಸಲಾತಿ ನಿರಾಕರಿಸಿದ್ದರು, ಆಗ ಈ ಸ್ವಾಮೀಜಿ ಏನು ಮಾಡುತ್ತಿದ್ದರು. ಈಗ ಹಂತ ಹಂತವಾಗಿ ಬಿಜೆಪಿ ಮೀಸಲಾತಿ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತಿದೆ. ಆದರೆ, ಸ್ವಾಮೀಜಿ ರಾಜಕೀಯ ಮಾಡುತ್ತಿದ್ದಾರೆ ಎಂದು ಬಸವ ಜಯಮೃತ್ಯುಂಜಯ ಶ್ರೀ ವಿರುದ್ಧ ಸಚಿವ ನಿರಾಣಿ ಗರಂ ಆದರು.
ಶಾಸಕ ಯತ್ನಾಳ್ ವಿರುದ್ಧ ಮತ್ತೆ ಆಕ್ರೋಶ:ನಾನಾಗಿಯೇ ಯತ್ನಾಳ್ ವಿರುದ್ಧ ವಾಗ್ದಾಳಿ ಮಾಡಿಲ್ಲ, ಅವರು ನನ್ನ ವಿರುದ್ಧ ಬಳಕೆ ಮಾಡಿದ ಭಾಷೆ ಸರಿಯಲ್ಲ, ಅವರು ನನ್ನ ವಿರುದ್ಧ ನೀಡಿದ ಹೇಳಿಕೆಗೆ ಉತ್ತರ ಕೊಟ್ಟಿದ್ದೇನೆ. ಅವರನ್ನು ಸಹಿಸಿಕೊಂಡಿದ್ದು ಆಗಿದೆ, ಇನ್ನು ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ಹೇಳುತ್ತಾ ಸಚಿವ ಮುರಗೇಶ ನಿರಾಣಿ, ಶಾಸಕ ಯತ್ನಾಳ್ ಆರೋಪಕ್ಕೆ ಭಾವುಕರಾದರು.
ಸರಿಯಾದ ರೀತಿಯಲ್ಲಿ ಮೀಸಲಾತಿ ನೀಡಲು ಬಿಜೆಪಿ ಪ್ರಯತ್ನಿಸುತ್ತಿದೆ: ಮುರುಗೇಶ್ ನಿರಾಣಿ ಮುರುಗೇಶ್ ನಿರಾಣಿ ಕಣ್ಣೀರು: ಯತ್ನಾಳ್ ಹೇಳಿಕೆಗೆ ಮನನೊಂದು ಮಾತನಾಡಿದ ಸಚಿವ ನಿರಾಣಿ. ಯತ್ನಾಳ್ ಯಾರಿಗೆ ಬಿಟ್ಟಿದ್ದಾರೆ, ''ಹಗರುವಾಗಿ ಮಾತನಾಡುತ್ತಲೇ ಇದ್ದಾರೆ. ಜೆಡಿಎಸ್ಗೆ ಹೋಗಿ ಟಿಪ್ಪು ಟೋಪಿ ಹಾಕಿದ್ದು ಎಲ್ಲರಿಗೂ ಗೊತ್ತಿದೆ. ಯತ್ನಾಳ್ ಡೋಂಗಿ ರಾಜಕಾರಣ ಮಾಡುತ್ತಿದ್ದಾರೆ. ನಾವು ಕೃಷ್ಣ, ಘಟಪ್ರಭ ನೀರು ಕುಡಿದೇ ಬೆಳದಿದ್ದೇವೆ, ನಮಗೂ ಮಾತನಾಡುವುದಕ್ಕೆ ಬರುತ್ತದೆ. ಸುಮ್ಮನೆ ಇದ್ದೀವಿ ಅಂದರೆ ದೌರ್ಬಲ್ಯ ಅಲ್ಲ, ಯತ್ನಾಳ್ ಏನೂ ಸತ್ಯ ಹರಿಶ್ಚಂದ್ರ ಅಲ್ಲ. ದೊಡ್ಡ ಸಮಾಜದಲ್ಲಿ ಹುಟ್ಟಿದ್ದೀರಿ ಗೌರವದಿಂದ ಮಾತನಾಡಿ'' ಎಂದು ಹೇಳಿದರು.
ಯತ್ನಾಳ್ಗೆ ಟಿಕೆಟ್ ಸಿಗಲ್ಲ ಎಂದಿದ್ದ ನಿರಾಣಿ:ಈ ಹಿಂದೆ ಯತ್ನಾಳ್ ಮತ್ತು ನಿರಾಣಿ ನಡುವೆ ಮೀಸಲಾತಿ ಮತ್ತು ಸಿಡಿ ವಿಚಾರವಾಗಿ ಆರೋಪ ಪ್ರತ್ಯಾರೋಪ ಮಾಡಿಕೊಂಡಿದ್ದರು. 2023 ರಲ್ಲಿ ಗೆದ್ದು ತೋರಿಸಿ ಎಂದು ನಿರಾಣಿ ಯತ್ನಾಳ್ಗೆ ಸವಾಲು ಹಾಕಿದ್ದರಲ್ಲದೇ ತಾಕತ್ತು ಇದ್ದರೆ ನಿನ್ನ ಎಲೆಕ್ಷನ್ ನೀನು ಮಾಡು, ನಾನು ನನ್ನ ಎಲೆಕ್ಷನ್ ಮಾಡುತ್ತೇನೆ ಎಂದಿದ್ದರು. ಹುಡುಗಾಟ ಹಚ್ಚೀರಿ? ನೀನು ಗೆದ್ದು ತೋರಿಸು, ವಿಜಯಪುರ ಜನ ನಿನಗೆ 2023ರಲ್ಲಿ ಪಾಠ ಕಲಿಸ್ತಾರೆ ಎಂದು ಯತ್ನಾಳ್ ವಿರುದ್ಧ ಆಕ್ರೋಶ ಹೊರಹಾಕಿದ್ದರು.
ಇದಕ್ಕೆ ಪ್ರತಿಯಾಗಿ ಬಸನಗೌಡ ಪಾಟೀಲ್ ಯತ್ನಾಳ್ ಟಿಕೆಟ್ ನಿರಾಣಿ ಕೊಡುವುದಿಲ್ಲ. ನನಗೆ ಟಿಕೆಟ್ ಕೊಡಲು ಇವರು ಯಾರು?. ಟಿಕೆಟ್ ಕೊಡುವ ಅಧಿಕಾರ ಇವರಿಗೆ ಎಲ್ಲಿದೆ ಎಂದು ಟೀಕೆ ಮಾಡಿದ್ದರು. ಅಲ್ಲದೇ ಸಿಡಿ ಇಟ್ಟುಕೊಂಡು ಅಧಿಕಾರ ಹಿಡಿದಿದ್ದಾರೆ. ಈಗ ಮೀಸಲಾತಿ ಕೊಡಿಸುವ ನಾಟಕ ಮಾಡುತ್ತಿದ್ದಾರೆ. ಮೀಸಲಾತಿಗಾಗಿ ವಾಜಪೇಯಿ ಇದ್ದಾಗಿನಿಂದಲೇ ನಾನು ಹೋರಾಟ ಮಾಡುತ್ತಾ ಬಂದಿದ್ದೇನೆ. ಈಗ ನಡುವೆ ಪ್ರವೇಶ ಮಾಡಿ ನಿರಾಣಿ ಲಾಭ ಮಾಡಿ ಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದರು. ಅಂದು ಸಿಡಿ ವಿಚಾರವಾಗಿ ನಿರಾಣಿ ಮೇಲೆ ಮಾಡಿದ್ದ ಆರೋಪ ಪ್ರತಿ ಪಕ್ಷಕ್ಕೆ ಆಹಾರವಾಗಿತ್ತು.
ಇದನ್ನೂ ಓದಿ:2023ರ ಚುನಾವಣೆಯಲ್ಲಿ ಗೆದ್ದು ತೋರಿಸಿ ಎಂದು ಯತ್ನಾಳ್ಗೆ ನಿರಾಣಿ ಸವಾಲು: ಟಿಕೆಟ್ ಇವರು ಕೊಡ್ತಾರಾ ಎಂದು ತಿರುಗೇಟು ನೀಡಿದ ಬಸವನಗೌಡ