ದಾವಣಗೆರೆ: ಪೋಕ್ಸೊ ಪ್ರಕರಣದಲ್ಲಿ ಜೈಲು ಸೇರಿದ್ದ ಮುರುಘಾ ಮಠದ ಶ್ರೀ ಶಿವಮೂರ್ತಿ ಮುರುಘಾ ಶರಣರು ಸದ್ಯ ಚಿತ್ರದುರ್ಗ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಚಿತ್ರದುರ್ಗ ಮಠಕ್ಕೆ ಹೋಗಲು ಕೋರ್ಟ್ ನಿರ್ಬಂಧ ಹೇರಿದ ಹಿನ್ನೆಲೆ ಜೈಲಿನಿಂದ ಹೊರಬಂದ ಅವರು, ನೇರವಾಗಿ ದಾವಣಗೆರೆಯ ಶಿವಯೋಗಿ ಮಂದಿರಕ್ಕೆ ತೆರಳಿ ಮುರುಘಾ ಶರಣರ ಗದ್ದುಗೆಗೆ ಭೇಟಿ ಕೊಟ್ಟು ಆಶೀರ್ವಾದ ಪಡೆದರು.
ಮುರುಘಾ ಶರಣರ ಗದ್ದುಗೆ ಭೇಟಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಶಿವಮೂರ್ತಿ ಮುರುಘಾ ಶರಣರು, ನಾನು ಮೌನಕ್ಕೆ ಶರಣಾಗಿದ್ದೇನೆ, ಪ್ರಕರಣ ನ್ಯಾಯಾಲಯದಲ್ಲಿ ನಡೆಯುತ್ತಿರುವುದರಿಂದ ಯಾವುದೇ ಪ್ರತಿಕ್ರಿಯೆ ಕೋಡೋದಿಲ್ಲ. ಸದ್ಯ ಏನು ಹೇಳುವುದಿಲ್ಲ, ಮುಂದೆ ಹೇಳುತ್ತೇನೆ, ನನ್ನ ಪರವಾಗಿ ನನ್ನ ವಕೀಲರು ನಿಮಗೆ ಮಾಹಿತಿ ಕೊಡಲಿದ್ದಾರೆ. ಸದ್ಯ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದೇನೆ ಎಂದು ಹೇಳಿದರು. ಈ ವೇಳೆ ಶ್ರೀಗಳು ಶಿವಯೋಗಿ ಮಂದಿರಕ್ಕೆ ಆಗಮಿಸುತ್ತಿದ್ದಂತೆ ಭಕ್ತ ವೃಂದ ಶ್ರೀಯವರಿಗೆ ಹೂವಿನ ಹಾರ ಹಾಕಿ ಸಿಹಿ ತಿನ್ನಿಸಿದರು. ಬಳಿಕ ಇತರರಿಗೆ ಸಿಹಿ ಹಂಚಿ ಸಂಭ್ರಮಿಸಿದರು. ಇನ್ನು ಕೆಲ ಭಕ್ತರು ಹಾರ ತುರಾಯಿ ಹಾಕಿ ಸ್ವಾಮೀಜಿಯವರ ಆಶೀರ್ವಾದ ಪಡೆದರು.
ಶಾಖಾ ಮಠಕ್ಕೆ ಆಗಮಿಸಿದ ಮುರುಘಾ ಶ್ರೀ:ಮುರುಘಾ ಶರಣರ ಗದ್ದುಗೆಗೆ ಭೇಟಿ ನೀಡಿ ಆಶೀರ್ವಾದ ಪಡೆದ ಬಳಿಕ ಶಿವಮೂರ್ತಿ ಮುರುಘಾ ಶರಣರು ಹಳೇ ದಾವಣಗೆರೆಯಲ್ಲಿರುವ ವಿರಕ್ತ ಮಠಕ್ಕೆ ಭೇಟಿ ನೀಡಿದ್ದಾರೆ. ಈ ಮಠ ಜಯದೇವ ಮುರುಘಾ ಮಠದ ಶಾಖಾ ಪೀಠಗಳಲ್ಲಿ ಒಂದಾಗಿದ್ದು, ಶ್ರೀಗಳು ಇಲ್ಲೇ ವಾಸ್ತವ್ಯ ಹೂಡಲಿದ್ದಾರೆ. ಇನ್ನು ಈ ವಿರಕ್ತ ಮಠದಲ್ಲಿ ತಮ್ಮ ಕೋಣೆಯಲ್ಲಿರುವ ಸ್ವಾಮೀಜಿಯನ್ನು ಕಾಣಲು ಬರುವ ಭಕ್ತರಿಗೆ ವಿರಕ್ತ ಮಠದಲ್ಲೇ ಶ್ರೀಗಳು ಸಿಗುತ್ತಾರೆಂದು ಶಿಷ್ಯಂದಿರು ಮಾಹಿತಿ ನೀಡಿದ್ದಾರೆ. 14 ತಿಂಗಳ ನಂತರ ದಾವಣಗೆರೆಗೆ ಆಗಮಿಸಿರುವ ಸ್ವಾಮೀಜಿಯವರನ್ನು ಭೇಟಿಯಾಗಲು ಸಮಾಜದ ಮುಖಂಡರು ಸೇರಿ ಭಕ್ತರು ವಿರಕ್ತ ಮಠದ ಆವರಣಕ್ಕೆ ಆಗಮಿಸುತ್ತಿದ್ದಾರೆ.