ವರ್ಷಾಂತ್ಯದಲ್ಲಿ ಹೆದ್ದಾರಿ ಕಾಮಗಾರಿ ಪೂರ್ಣಗೊಳಿಸಿ: ಸಂಸದ ಸಿದ್ದೇಶ್ವರ್ ಸೂಚನೆ - MP Siddeshwara latest news
ಇಂದು ಸಂಸದ ಜಿ.ಎಂ.ಸಿದ್ದೇಶ್ವರ್ ಅಧಿಕಾರಿಗಳ ಜೊತೆ ರಾಷ್ಟ್ರೀಯ ಹೆದ್ದಾರಿ ನಂ.48ರ ಅಗಲೀಕರಣ, ನಿರ್ಮಾಣ ಯೋಜನೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.
ದಾವಣಗೆರೆ:ಇನ್ನು ಆರು ತಿಂಗಳೊಳಗೆ ರಾಷ್ಟ್ರೀಯ ಹೆದ್ದಾರಿ-48ರ ಅಗಲೀಕರಣ ನಿರ್ಮಾಣ ಯೋಜನೆ ಪೂರ್ಣಗೊಳಿಸಬೇಕು ಎಂದು ಸಂಸದ ಜಿ.ಎಂ.ಸಿದ್ದೇಶ್ವರ್ ಸೂಚನೆ ನೀಡಿದರು.
ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲೆಯ ವ್ಯಾಪ್ತಿಯಲ್ಲಿನ ರಾಷ್ಟ್ರೀಯ ಹೆದ್ದಾರಿ ನಂ.48ರ ಅಗಲೀಕರಣ, ನಿರ್ಮಾಣ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈ ಯೋಜನೆಯಡಿ ತಾಲೂಕಿನಲ್ಲಿ 14 ಮತ್ತು ಹರಿಹರ ತಾಲೂಕಿನಲ್ಲಿ 4 ಗ್ರಾಮ ಸೇರಿದಂತೆ ಒಟ್ಟು 18 ಗ್ರಾಮಗಳು ಬರುತ್ತವೆ. ಜಿಲ್ಲೆಯಲ್ಲಿ 46.5 ಕಿ.ಮೀ. ರಸ್ತೆ ಹಾದು ಹೋಗಲಿದ್ದು, 28.68 ಹೆಕ್ಟೇರ್ ಪ್ರದೇಶವನ್ನು ಸ್ವಾಧೀನ ಪಡಿಸಲಾಗುವುದು ಎಂದು ತಿಳಿಸಿದರು.
ಆರು ಪಥದ ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಶೇ. 98.62 ಭೂ ಸ್ವಾಧೀನಪಡಿಸಿಕೊಳ್ಳಲಾಗಿದೆ. ಶಾಮನೂರು ಮತ್ತು ಹೆಚ್.ಕಲಪನಹಳ್ಳಿಯಲ್ಲಿ ಒಟ್ಟು 1 ಹೆಕ್ಟೇರ್ ಜಮೀನು ಅನುಮೋದನೆಗೆ ಬಾಕಿ ಇದೆ. ಅಂಡರ್ ಪಾಸ್ಗಳಲ್ಲಿ ರಸ್ತೆ ಸರಿಪಡಿಸುವುದು ಮತ್ತು ಅವಶ್ಯಕತೆ ಇರುವೆಡೆ ಅಂಡರ್ ಪಾಸ್ ನಿರ್ಮಿಸಬೇಕೆಂದು ಅಧಿಕಾರಿಗಳಿಗೆ ತಿಳಿಸಿದ್ದು, ಅವರು ಅದಕ್ಕೆ ಒಪ್ಪಿಕೊಂಡಿದ್ದಾರೆ ಎಂದರು.
ನಾನು ಮತ್ತು ಡಿಸಿ ಹದಡಿ-ಕುಂದುವಾಡ ರಸ್ತೆ ಪರಿಶೀಲನೆ ನಡೆಸಿದ ನಂತರ ಚರ್ಚೆ ನಡೆಸಿ ಕ್ರಮ ಕೈಗೊಳ್ಳುತ್ತೇವೆ. ಬನಶಂಕರಿ ಬಡಾವಣೆ ಮತ್ತು ವಿದ್ಯಾನಗರದಲ್ಲಿ ಸರ್ವೀಸ್ ರಸ್ತೆ ಆಗಿಲ್ಲ. ಹೈಟೆನ್ಷನ್ ಲೈನ್‍ಗಳ ಶಿಫ್ಟಿಂಗ್ ಆಗಬೇಕು. ಜೂನ್ 20ರೊಳಗೆ ಈ ಯೋಜನೆ ಮುಗಿಯಬೇಕಿತ್ತು. ಆದರೆ ಕೊರೊನಾ ಹಿನ್ನೆಲೆಯಲ್ಲಿ ಸರ್ಕಾರವೇ ಆರು ತಿಂಗಳು ಹೆಚ್ಚುವರಿ ಅವಧಿ ನೀಡಿದ್ದು, ಈ ವರ್ಷಾಂತ್ಯದಲ್ಲಿ ಎನ್ಹೆಚ್ಗೆ ಸಂಬಂಧಿಸಿದ ಎಲ್ಲಾ ಕೆಲಸಗಳನ್ನು ಮುಗಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.