ದಾವಣಗೆರೆ:"ಏನ್ರೀ ಸರ್ಕಾರದ ವಿರುದ್ಧ ಕೆಲಸ ಮಾಡ್ತಿದ್ದೀರಾ. ಫೋನ್ ಮಾಡಿದರೆ ರಿಸೀವ್ ಮಾಡಲ್ಲ. ಸಂಬಳಕ್ಕೋಸ್ಕರ ಕೆಲಸ ಮಾಡ್ತೀರಾ?, ನಮ್ಗೇನೂ ಜೀವ ಭಯ ಇರೋಲ್ವಾ.?, ಹಿರಿಯ ಅಧಿಕಾರಿಗಳು ಬೇಗನೇ ಸ್ಪಂದಿಸ್ತಾರೆ. ನಿಮ್ಮ ವರ್ತನೆ ಹೀಗೆ ಮುಂದುವರಿದರೆ ಸಹಿಸೋಕೆ ಆಗೋಲ್ಲ" ಎಂದು ಸಿಎಂ ರಾಜಕೀಯ ಕಾರ್ಯದರ್ಶಿ, ಶಾಸಕ ಎಂ.ಪಿ. ರೇಣುಕಾಚಾರ್ಯ ತಾಲೂಕು ಮಟ್ಟದ ಅಧಿಕಾರಿಗಳ ವಿರುದ್ಧ ಗರಂ ಆಗಿದ್ದಾರೆ.
ಏನ್ರೀ ಸರ್ಕಾರದ ವಿರುದ್ಧ ಕೆಲಸ ಮಾಡ್ತೀರಾ?: ಅಧಿಕಾರಿಗಳಿಗೆ ಬೆವರಿಳಿಸಿದ ರೇಣುಕಾಚಾರ್ಯ - ದಾವಣಗೆರೆಯಲ್ಲಿ ಕೊರೊನಾ
ಹೊನ್ನಾಳಿ ಪಟ್ಟಣದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಕಾರಣದಿಂದ ಸಭೆ ಕರೆದಿದ್ದ ಸಿಎಂ ರಾಜಕೀಯ ಕಾರ್ಯದರ್ಶಿ, ಶಾಸಕ ರೇಣುಕಾಚಾರ್ಯ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೊನ್ನಾಳಿ ಪಟ್ಟಣದಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕರೆಯಲಾಗಿದ್ದ ಡಿಸಿ, ಎಸ್ಪಿ ಸೇರಿದಂತೆ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಡಿಸಿ, ಎಸ್ಪಿ, ಡಿಹೆಚ್ ಒ ಹಾಗೂ ಜಿಲ್ಲಾ ಸರ್ವೇಕ್ಷಣಾಧಿಕಾರಿಗಳಂಥ ಹಿರಿಯ ಅಧಿಕಾರಿಗಳಿಗೆ ಕರೆ ಮಾಡಿದರೆ ಬೇಗನೇ ಸ್ಪಂದಿಸುತ್ತಾರೆ. ಆದ್ರೆ ಹೊನ್ನಾಳಿ ಹಾಗೂ ನ್ಯಾಮತಿ ತಾಲೂಕಿನ ಕೆಲ ಅಧಿಕಾರಿಗಳು ಕೆಲಸ ಸರಿಯಾಗಿ ಮಾಡುತ್ತಿಲ್ಲ. ಎಲ್ಲಿಗೆ ಹೋಗುತ್ತಾರೆ, ಏನು ಮಾಡುತ್ತಾರೆ ಎಂಬುದೇ ಗೊತ್ತಿಲ್ಲ. ಇಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಮೊದಲೇ ಜನರು ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಆತಂಕಕ್ಕೊಳಗಾಗಿದ್ದಾರೆ. ಕೆಲ ಅಧಿಕಾರಿಗಳು ಜನರ ಕಷ್ಟಕ್ಕೆ ಆಗುತ್ತಿಲ್ಲ. ಇಂಥವರಿದ್ದರೆ ಕೊರೊನಾ ತಡೆಯುವುದಾದರೂ ಹೇಗೆ ಎಂದು ಜಿಲ್ಲಾಧಿಕಾರಿ ಅವರನ್ನೇ ಪ್ರಶ್ನಿಸಿದರು. ನಾನು ಸರ್ಕಾರದ ಸಂಬಳ ತಿನ್ನುತ್ತೇನೆ. ಜನಸೇವಕನಾಗಿ ಕೆಲಸ ಮಾಡುತ್ತಿದ್ದೇನೆ. ನೀವೂ ಈ ವೇಳೆಯಲ್ಲಿ ಸರಿಯಾಗಿ ಕೆಲಸ ಮಾಡಿ ಎಂದು ತಾಕೀತು ಮಾಡಿದರು.