ದಾವಣಗೆರೆ:ಹೊನ್ನಾಳಿ ಶಾಸಕ, ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಪ್ರತಿ ಬಾರಿಯೂ ವಿವಾದಗಳನ್ನು ಮೈಮೇಲೆ ಎಳೆದುಕೊಂಡು ಸದಾ ಸುದ್ದಿಯಲ್ಲಿರುವ ಜನಪ್ರತಿನಿಧಿ. ಇತ್ತೀಚಿಗೆ ಬೇಡ ಜಂಗಮ ಸಮುದಾಯದ ಪರಿಶಿಷ್ಟ ಜಾತಿ ಪ್ರಮಾಣಪತ್ರ ಪಡೆದಿದ್ದಾರೆ ಎನ್ನಲಾದ ವಿಚಾರ ವಿಧಾನಸಭೆಯಲ್ಲಿ ಪ್ರತಿಧ್ವನಿಸಿತ್ತು.
ಇದನ್ನೇ ಅಸ್ತ್ರವಾಗಿಸಿಕೊಂಡ ಕಾಂಗ್ರೆಸ್ ನಾಯಕರು ಸೇರಿ ಇತರರು ರೇಣುಕಾಚಾರ್ಯ ವಿರುದ್ಧ ಮುಗಿಬಿದ್ದಿದ್ದರು. ಅಲ್ಲದೇ, ದಲಿತ ಪರ ಸಂಘಟನೆಗಳು ಇಡೀ ರಾಜ್ಯಾದ್ಯಂತ ರೇಣುಕಾಚಾರ್ಯ ಹಾಗೂ ಅವರ ಕುಟುಂಬದ ವಿರುದ್ಧ ಬೀದಿಗಿಳಿದು ಪ್ರತಿಭಟನೆ ಮಾಡಿದ್ದರು. ಇದರಿಂದ ಸಾಕಷ್ಟು ಸಂಕಷ್ಟಕ್ಕೆ ಸಿಲುಕಿದಂತೆ ಆಗಿತ್ತು. ಇದೀಗ ಇದರ ಡ್ಯಾಮೇಜ್ ಕಂಟ್ರೋಲ್ ಮಾಡಲಿಕ್ಕೆ ರೇಣುಕಾಚಾರ್ಯ ಯತ್ನಿಸುತ್ತಿದ್ದಾರೆ ಎನ್ನಲಾಗ್ತಿದೆ.
ಇದಕ್ಕೆ ಕಾರಣ ಈಗಾಗಲೇ ತಮ್ಮ ಕ್ಷೇತ್ರದಲ್ಲಿ ಎಸ್ಸಿ-ಎಸ್ಟಿ ಸಮಾವೇಶ ಮಾಡಿ ತಮ್ಮ ಶಕ್ತಿ ಪ್ರದರ್ಶನ ಮಾಡಿರುವುದು. ಜತೆಗೆ ತಮ್ಮ ಕ್ಷೇತ್ರದ ಪ್ರತಿಯೊಂದು ಹಳ್ಳಿಗೆ ತೆರಳಿ ಬಾಬಾಸಾಹೇಬ್ ಅಂಬೇಡ್ಕರ್ ಅವರ 131 ನೇ ಜಯಂತಿ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ದಲಿತರನ್ನು ತನ್ನತ್ತ ಸೆಳೆಯಲು ಮುಂದಾಗಿದ್ದಾರೆ. ಎಸ್ಸಿ ಪ್ರಮಾಣಪತ್ರ ನಾನು ಪಡೆದಿಲ್ಲ. ನನ್ನ ಸಹೋದರ ಮತ್ತು ಪುತ್ರಿ ಪಡೆದಿದ್ದರು. ಅದನ್ನು ಹಿಂದಿರುಗಿಸಲು ಹೇಳಿದ್ದೇ ಎಂದು ರೇಣುಕಾಚಾರ್ಯ ನೀಡುತ್ತಿರುವ ಸ್ಪಷ್ಟನೆಯಿಂದ ದಲಿತ ಮುಖಂಡರು ಸಮಾಧಾನಗೊಂಡಿಲ್ಲ. ಹೀಗಾಗಿಯೇ ಈ ಪ್ರಕರಣವನ್ನು ಮರೆಮಾಚಲು ದಲಿತರ ಕೇರಿಗಳಿಗೆ ತೆರಳಿ ವಿಜೃಂಭಣೆಯಿಂದ ಅಂಬೇಡ್ಕರ್ ಜಯಂತಿ ಮಾಡುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.