ಮಾಜಿ ಶಾಸಕ ರೇಣುಕಾಚಾರ್ಯ ಹೇಳಿಕೆ ದಾವಣಗೆರೆ :ದೇಶಕ್ಕೆ ಮೋದಿ ಹೇಗೋ ಹಾಗೇ ರಾಜ್ಯಕ್ಕೆ ಯಡಿಯೂರಪ್ಪ. ಪಕ್ಷಕ್ಕೆ ಹಾನಿ ಆದ ಮೇಲೆ ಇದೀಗ ಯಡಿಯೂರಪ್ಪನವರ ಮುಂದಾಳುತ್ವದ ಬಗ್ಗೆ ಮಾತನಾಡುತ್ತಾರೆ ಎಂದು ಮಾಜಿ ಶಾಸಕ ಎಂ ಪಿ ರೇಣುಕಾಚಾರ್ಯ ಸ್ವಪಕ್ಷೀಯರ ವಿರುದ್ಧವೇ ವಾಗ್ದಾಳಿ ನಡೆಸಿದರು. ಇಂದು ಮಾಜಿ ಶಾಸಕ ಗುರುಸಿದ್ದನಗೌಡರ ನಿವಾಸಕ್ಕೆ ಭೇಟಿ ನೀಡಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿಯನ್ನು ಕಟ್ಟಿದ್ದೇ ಯಡಿಯೂರಪ್ಪ. ಯಡಿಯೂರಪ್ಪನವರು ಬೂತ್ ಮಟ್ಟದಿಂದ ಸಂಘಟನೆ ಮಾಡಿ ಪಕ್ಷವನ್ನು ಕಟ್ಟಿದರು ಎಂದು ಹೇಳಿದರು.
ಯಡಿಯೂರಪ್ಪ ಎಲ್ಲಾ ಸಮುದಾಯಗಳನ್ನು ಒಟ್ಟಿಗೆ ತೆಗೆದುಕೊಂಡು ಹೋದ ನಾಯಕ. ಬಳಿಕ ಯಡಿಯೂರಪ್ಪನವರನ್ನು ವ್ಯವಸ್ಥಿತವಾಗಿ ಇಳಿಸುವ ಕೆಲಸ ಮಾಡಿದರು. ಆದರೆ ಬಿಎಸ್ವೈ ವಿರುದ್ಧ ಮಾತನಾಡಿದವರಿಗೆ ನೋಟಿಸ್ ನೀಡಲಿಲ್ಲ. ಪಕ್ಷಕ್ಕೆ ಸಾಕಷ್ಟು ಹಾನಿ ಆದ ಮೇಲೆ ಇದೀಗ ಯಡಿಯೂರಪ್ಪ ಅವರ ಬಗ್ಗೆ ಮಾತನಾಡುತ್ತಾರೆ. ಆಡು ಮುಟ್ಟದ ಸೊಪ್ಪಿಲ್ಲ, ಬಿಎಸ್ವೈ ನೋಡದ ಹಳ್ಳಿ ಇಲ್ಲ. ಬಿಎಸ್ವೈ ಅವರು ಪ್ರತಿ ಹಳ್ಳಿಗೂ ತೆರಳಿ ಪಕ್ಷ ಸಂಘಟನೆ ಮಾಡಿದ್ದರು. ಬಿಎಸ್ವೈ ಕಡೆಗಣಿಸಿದ್ದೇ ಪಕ್ಷದ ಸೋಲಿಗೆ ಕಾರಣವಾಗಿದೆ. ಗ್ರಾಮ ಪಂಚಾಯತ್ನಲ್ಲಿ ಗೆಲ್ಲಲು ಆಗದವರು ಪಕ್ಷದ ಜವಾಬ್ದಾರಿ ವಹಿಸಿಕೊಂಡಿದ್ದರು. ಈಗ ಮತ ಪಡೆಯಲು ಬಿಎಸ್ವೈ ನಾಯಕತ್ವ ಎನ್ನುತ್ತಿದ್ದಾರೆ ಎಂದು ರೇಣುಕಾಚಾರ್ಯ ಟೀಕಿಸಿದರು.
ನಾನು ಲೋಕಸಭೆ ಚುನಾವಣೆ ಟಿಕೆಟ್ ಆಕಾಂಕ್ಷಿ. ಟಿಕೆಟ್ ಬಗ್ಗೆ ಕಾದು ನೋಡುತ್ತೇನೆ, ಟಿಕೆಟ್ ಸಿಗದೇ ಇದ್ದರೆ ಕಾರ್ಯಕರ್ತರ ಅಭಿಪ್ರಾಯ ಪಡೆದು ಮುಂದಿನ ತೀರ್ಮಾನ ಕೈಗೊಳ್ಳುತ್ತೇನೆ ಎಂದು ಮಾಜಿ ಶಾಸಕ ಎಂಪಿ ರೇಣುಕಾಚಾರ್ಯ ಹೇಳಿದರು.
ಮಾಜಿ ಶಾಸಕ ಗುರುಸಿದ್ದನಗೌಡ ಉಚ್ಚಾಟನೆಗೆ ಆಕ್ರೋಶ: ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ವಿರೋಧಿ ಕೆಲಸ ಮಾಡಿದ್ದಾರೆಂಬ ಆರೋಪದ ಮೇಲೆ ಪಕ್ಷದಿಂದ ಉಚ್ಚಾಟಿಸಲ್ಪಟ್ಟಿರುವ ಮಾಜಿ ಶಾಸಕ ಗುರುಸಿದ್ದನಗೌಡ ಮನೆಗೆ ಎಂಪಿ ರೇಣುಕಾಚಾರ್ಯ ಭೇಟಿ ನೀಡಿದರು. ಬಳಿಕ ಮಾತನಾಡಿದ ಅವರು, ನೋಟಿಸ್ ನೀಡದೇ ಉಚ್ಚಾಟನೆ ಮಾಡಿದ್ದು ಖಂಡನೀಯ. ಚುನಾವಣೆಯ ಸಂದರ್ಭದಲ್ಲಿ ಓಡಾಟ ಮಾಡಿ ಪಕ್ಷ ಕಟ್ಟಿದವರು. ಪಕ್ಷದಿಂದ ಉಚ್ಚಾಟನೆ ಮಾಡುತ್ತಾರೆ ಎಂದರೆ ಹೇಗೆ ಎಂದು ಪ್ರಶ್ನಿಸಿದರು.
ಚುನಾವಣೆಯಲ್ಲಿ ಅಭ್ಯರ್ಥಿ ವಿರುದ್ಧ ಕೆಲಸ ಮಾಡಿದರೆ ನೋಟಿಸ್ ನೀಡಬೇಕು. ಆದರೆ ಯಾವುದೇ ನೋಟಿಸ್ ನೀಡದೆ ಪಕ್ಷದಿಂದ ಗುರುಸಿದ್ದನಗೌಡರನ್ನು ಉಚ್ಚಾಟನೆ ಮಾಡಿದ್ದಾರೆ. ಇನ್ನು ಅವರ ಪುತ್ರ ರವಿ ಕುಮಾರ್ ಲೋಕಾಸಭಾ ಚುನಾವಣೆ ಟಿಕೆಟ್ ಅಕಾಂಕ್ಷಿ ಆಗಿರುವುದರಿಂದ ಬೆಳೆಯಬಾರದು ಎಂದು ಉಚ್ಚಾಟನೆ ಮಾಡಿದ್ದು ಖಂಡನೀಯ. ಮಾಜಿ ಶಾಸಕ ರವೀಂದ್ರನಾಥ, ಗುರುಸಿದ್ದನಗೌಡರನ್ನು ಮೂಲೆಗುಂಪು ಮಾಡುತ್ತಾರೆ. ಜಿಲ್ಲೆಯ ಐದು ಶಾಸಕರು ಒಟ್ಟಾಗಿ ಸಚಿವ ಸ್ಥಾನ ಕೇಳಿದರೂ ಕೊಡಲು ಬಿಡಲಿಲ್ಲ. ಸಚಿವ ಸ್ಥಾನ ತಪ್ಪಿಸಿದರು, ಉಚ್ಚಾಟನೆ ಮಾಡುವ ವಿಚಾರದಲ್ಲಿ ಏಕಪಕ್ಷೀಯವಾಗಿ ಜಿಲ್ಲಾಧ್ಯಕ್ಷರು ನಿರ್ಧಾರ ಕೈಗೊಂಡಿದ್ದಾರೆ ಎಂದು ರೇಣುಕಾಚಾರ್ಯ ಆಕ್ರೋಶ ಹೊರಹಾಕಿದರು.
ನನ್ನ ಹೋರಾಟ ಯಾರ ವಿರುದ್ಧವೂ ಕತ್ತಿ ಮಸಿಯೋಕೆ ಅಲ್ಲ. ನಾನು ಪಕ್ಷ ಉಳಿಸಲು ಕೆಲಸ ಮಾಡುತ್ತೇನೆ. ನಾಳೆ ಮಾಡಾಳ್ ವಿರುಪಾಕ್ಷಪ್ಪ ಅವರನ್ನೂ ಭೇಟಿ ಮಾಡುತ್ತೇನೆ. ನನ್ನ ಮೇಲೆ ತೂಗುಗತ್ತಿ ತೂಗುತ್ತಾ ಇದೆ, ನಾನು ಯಾವುದಕ್ಕೂ ಹೆದರಲ್ಲ. ನೋಟಿಸ್ಗೆ ಉತ್ತರ ಕೊಡುವುದಿಲ್ಲ. ಬಿಎಸ್ವೈ ವಿರುದ್ಧ ಮಾತನಾಡಿರುವವರ ಮೇಲೆ ಮೊದಲು ಕ್ರಮ ಕೈಗೊಳ್ಳಿ ಎಂದು ರೇಣುಕಾಚಾರ್ಯ ಒತ್ತಾಯಿಸಿದರು.
ಇದನ್ನೂ ಓದಿ :ಹತಾಶೆ ಮನೋಭಾವನೆಯಿಂದ ಯತ್ನಾಳ್ ಹೇಳಿಕೆ ನೀಡುತ್ತಿದ್ದಾರೆ: ಈಶ್ವರ್ ಖಂಡ್ರೆ ವಾಗ್ದಾಳಿ