ದಾವಣಗೆರೆ :2023ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ಬಹುಮತ ಸಿಗದೆ ಮತ್ತೊಮ್ಮೆ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಬೇಕೆಂಬ ಕನಸು ನುಚ್ಚು ನೂರಾಗಿದೆ. ಇದರ ಬೆನ್ನಲ್ಲೇ ರಾಜ್ಯ ಬಿಜೆಪಿ ನಾಯಕರು ಪಕ್ಷ ಸೋತಿರುವುದಕ್ಕೆ ನಾನಾ ರೀತಿಯ ಕಾರಣಗಳನ್ನು ನೀಡುತ್ತಿದ್ದಾರೆ. ಇದೀಗ ಹೊನ್ನಾಳಿ ಮಾಜಿ ಶಾಸಕ ಎಂ ಪಿ ರೇಣುಕಾಚಾರ್ಯ ಅವರು ಬಿಜೆಪಿ ಸೋಲಿನ ಬಗ್ಗೆ ಪ್ರತಿಕ್ರಿಯಿಸಿದ್ದು, ರಾಜ್ಯ ಸರ್ಕಾರದ ತಪ್ಪು ನಿರ್ಧಾರಗಳು ಹಾಗೂ ಮೀಸಲಾತಿ ಗೊಂದಲದಿಂದ ಬಿಜೆಪಿಗೆ ದೊಡ್ಡಪೆಟ್ಟು ಬಿದ್ದಿದೆ ಎಂದು ತಿಳಿಸಿದರು.
ಜಿಲ್ಲೆಯ ಹೊನ್ನಾಳಿ ಪಟ್ಟಣದಲ್ಲಿರುವ ತಮ್ಮ ನಿವಾಸದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಸೋಲಿಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ. ಸೋಲೇ ಗೆಲುವಿನ ಮೆಟ್ಟಿಲು. ಕಾಂಗ್ರೆಸ್ ಹಸಿಸುಳ್ಳು ಹೇಳಿ, ಸುಳ್ಳು ಗ್ಯಾರೆಂಟಿ ಭರವಸೆಗಳನ್ನು ರಾಜ್ಯದ ಜನತೆಗೆ ಕೊಟ್ಟು ಅಧಿಕಾರಕ್ಕೆ ಬಂದಿದೆ. ಕಾಂಗ್ರೆಸ್ನವರು ಯಾವ ರೀತಿ ಸರ್ಕಾರ ನಡೆಸುತ್ತಾರೆ ಎಂಬುದನ್ನು ಕಾದು ನೋಡೋಣ ಎಂದರು.
ಇದನ್ನೂ ಓದಿ :ಧಾರವಾಡ ಜಿಲ್ಲೆಯಲ್ಲಿ ಕಾಂಗ್ರೆಸ್ ಅಭೂತಪೂರ್ವ ಗೆಲುವು: ಯಾರಿಗೆ ಸಿಗಲಿದೆ ಸಚಿವ ಸ್ಥಾನದ ಪಟ್ಟ?
ರಾಜ್ಯ ಸರ್ಕಾರದ ಕೆಲವೊಂದು ತಪ್ಪು ನಿರ್ಧಾರಗಳು ಹಾಗೂ ಮೀಸಲಾತಿ ವಿಚಾರದಲ್ಲಿ ಮಾಡಿಕೊಂಡ ಗೊಂದಲಗಳಿಂದ ಬಿಜೆಪಿಗೆ ಸೋಲಿನ ಅಘಾತವಾಗಿದೆ. ಉತ್ತಮ ಪ್ರಣಾಳಿಕೆ ನಮ್ಮದಿದ್ದರೂ ತಡವಾಗಿ ಬಿಡುಗಡೆ ಮಾಡಲಾಯಿತು. ಆದರೆ ಕಾಂಗ್ರೆಸ್ ನಾಯಕರು ಎರಡು ತಿಂಗಳು ಮುಂಚೆಯೇ ತಮ್ಮ ಪಕ್ಷದ ಪ್ರಣಾಳಿಕೆ ಬಗ್ಗೆ ಸುಳ್ಳು ಗ್ಯಾರಂಟಿ ಕಾರ್ಡ್ಗಳನ್ನು ನೀಡಿದರು. ಇದರಿಂದ ನಮಗೆ ಹಿನ್ನಡೆಯಾಯಿತು ಎಂದು ಎಂ ಪಿ ರೇಣುಕಾಚಾರ್ಯ ಅವರು ಹೇಳಿದರು.