ದಾವಣಗೆರೆ: ಪಕ್ಷ ಯಾರಿಗೆ ಟಿಕೆಟ್ ನೀಡಿದರೂ ಅವರ ಪರ ಕೆಲಸ ಮಾಡುತ್ತೇನೆ. ಇನ್ನು ಮುಂದೆ ಚುನಾವಣೆಗೆ ಬರುವುದಿಲ್ಲ ಎಂದು ಹೊನ್ನಾಳಿ ಕ್ಷೇತ್ರದ ಬಿಜೆಪಿ ಪರಾಜಿತ ಅಭ್ಯರ್ಥಿ ಎಂ.ಪಿ.ರೇಣುಕಾಚಾರ್ಯ ಹೇಳಿದರು. ಜಿಲ್ಲೆಯ ಹೊನ್ನಾಳಿಯ ತಮ್ಮ ನಿವಾಸದಲ್ಲಿ ಶನಿವಾರ ಅವರು ಬೇಸರದಿಂದ ಮಾತನಾಡಿದರು.
ರೇಣುಕಾಚಾರ್ಯ ಸೋಲುತ್ತಿದ್ದಂತೆ ಅವರ ನಿವಾಸದ ಮುಂದೆ ಅಪಾರ ಸಂಖ್ಯೆಯಲ್ಲಿ ಬೆಂಬಲಿಗರು ಜಮಾಯಿಸಿದ್ದರು. ಅವರನ್ನು ಉದ್ದೇಶಿಸಿ ಮಾತನಾಡುತ್ತಾ, ಕಣ್ಣೀರಿಟ್ಟರು. ಕಾಂಗ್ರೆಸ್ ಅಭ್ಯರ್ಥಿ ಡಿ.ಜಿ.ಶಾಂತನಗೌಡ್ರು ವಿರುದ್ದ ಸೋಲು ಅನುಭವಿಸಿದ ರೇಣುಕಾಚಾರ್ಯ, ತಮ್ಮ ಅಭಿಮಾನಿಗಳನ್ನು ಸಮಾಧಾನಪಡಿಸಿದರು. ಹರಿಹರ ಶಾಸಕ ಬಿ.ಪಿ.ಹರೀಶ್ ಕೂಡ ರೇಣುಕಾಚಾರ್ಯಗೆ ಧೈರ್ಯ ತುಂಬಿದರು. ಅಭಿವೃದ್ಧಿ ಕೆಲಸ, ಕೋವಿಡ್ನಲ್ಲಿ ಜೀವದ ಹಂಗು ತೊರೆದು ಕೆಲಸ ಮಾಡಿದರೂ ಜನ ಸೋಲಿಸಿದರು ಎಂದು ರೇಣುಕಾಚಾರ್ಯ ನೋವು ತೋಡಿಕೊಂಡರು. ರಾಜಕೀಯ ನಿವೃತ್ತಿ ಘೋಷಿಸದೇ ಪಕ್ಷ ಯಾರಿಗೆ ಟಿಕೆಟ್ ಕೊಟ್ಟರೂ ಅವರ ಪರವಾಗಿ ಕೆಲಸ ಮಾಡುವುದಾಗಿ ಎಂದು ಅವರು ಹೇಳಿದ್ದು ವಿಶೇಷವಾಗಿತ್ತು.
2008 ರಿಂದಲೂ ಹೊನ್ನಾಳಿಯಲ್ಲಿ ಕೈ-ಕಮಲ ಫೈಟ್:ಈ ಬಾರಿಯ ಚುನಾವಣೆ ಬಿಟ್ಟು ಹಿಂದಿನ ಮೂರು ಚುನಾವಣೆಗಳನ್ನು ಗಮನಿಸುವುದಾದರೆ, 2008 ರಿಂದಲೂ ಹೊನ್ನಾಳಿ ಕ್ಷೇತ್ರದಲ್ಲಿ ರೇಣುಕಾಚಾರ್ಯ ಹಾಗು ಕಾಂಗ್ರೆಸ್ ಅಭ್ಯರ್ಥಿ ಡಿ.ಜಿ.ಶಾಂತನಗೌಡ ನಡುವೆ ಪೈಪೋಟಿ ನಡೆದುಕೊಂಡೇ ಬಂದಿದೆ. 2008ರ ಚುನಾವಣೆಯಲ್ಲಿ ಕ್ಷೇತ್ರ ಬಿಜೆಪಿ ವಶವಾಗಿತ್ತು. ರೇಣುಕಾಚಾರ್ಯ 62,483 ಮತಗಳನ್ನು ಪಡೆದು ಶಾಂತನಗೌಡ ವಿರುದ್ಧ ಜಯ ಗಳಿಸಿದ್ದರು.