ದಾವಣಗೆರೆ: ದಾವಣಗೆರೆ ಜಿಲ್ಲೆಯ ಹೊನ್ನಾಳಿಯಲ್ಲಿ ನಿನ್ನೆ ಹಮ್ಮಿಕೊಂಡಿದ್ದ 1933 ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡುವ ಕಾರ್ಯಕ್ರಮ ಚುನಾವಣಾ ಪ್ರಚಾರದ ಸಭೆಯಾಗಿ ಪರಿವರ್ತನೆಯಾಗಿತ್ತು ಎಂದು ಸ್ಥಳೀಯ ಕಾಂಗ್ರೆಸ್ ಅಸಮಾಧಾನ ವ್ಯಕ್ತಪಡಿಸಿದೆ. ವಿವಿಧ ಅಭಿವೃದ್ಧಿ ಕಾಮಗಾರಿಗಳ ಸಮಾರಂಭದಲ್ಲಿ ಬಿಜೆಪಿ ಬಾವುಟಗಳು ರಾರಾಜಿಸಿದವು. ಅಷ್ಟೇ ಅಲ್ಲದೆ, ಈ ವೇಳೆ ಬಿಜೆಪಿ ಕಾರ್ಯಕರ್ತರು ಶಾಸಕ ರೇಣುಕಾಚಾರ್ಯರೊಂದಿಗೆ ಭರ್ಜರಿ ಡ್ಯಾನ್ಸ್ ಮಾಡಿ ಸಂಭ್ರಮಿಸಿದ್ದಾರೆ.
ಜಿಲ್ಲೆಯ ಹೊನ್ನಾಳಿ ಪಟ್ಟಣದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ 1933 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು. ಇದು ಸರ್ಕಾರಿ ಕಾರ್ಯಕ್ರಮವಾಗಿದ್ದು, ಶಾಸಕ ಎಂ ಪಿ ರೇಣುಕಾಚಾರ್ಯ ಪಕ್ಷದ ಪ್ರಚಾರ ಕಾರ್ಯಕ್ರಮವಾಗಿ ಪರಿವರ್ತಿಸಿಕೊಂಡ್ರು ಎನ್ನುವ ಮಾತುಗಳು ಕೇಳಿ ಬಂದಿವೆ. ಸರ್ಕಾರಿ ಅಧಿಕಾರಿಗಳು ಕೂಡ ಇದು ನಿಮ್ಮ ಪಕ್ಷದ ಕಾರ್ಯಕ್ರಮ ಅಲ್ವೇ ಅಲ್ಲ, ಇಲ್ಲಿ ಬಿಜೆಪಿ ಧ್ವಜಗಳನ್ನು ಪ್ರದರ್ಶಿಸ ಬೇಡಿ ಎಂದು ಮೈಕ್ ಮೂಲಕ ಮನವಿ ಮಾಡಿಕೊಂಡರು. ಆದರೂ ಕಾರ್ಯಕರ್ತರು ಅಧಿಕಾರಿಗಳ ಮಾತು ಕೇಳಲಿಲ್ಲ.
ಮಾಜಿ ಶಾಸಕರ ವಿರುದ್ಧ ರೇಣುಕಾಚಾರ್ಯ ವಾಗ್ದಾಳಿ: ಬಳಿಕ ಮಾತನಾಡಿದ ಶಾಸಕ ರೇಣುಕಾಚಾರ್ಯ, "80 ಲಕ್ಷವನ್ನು ಕೋವಿಡ್ ಸಮಯದಲ್ಲಿ ಲೂಟಿ ಹೊಡೆದ ಎಂದು ಆರೋಪಿ ನನ್ನ ಮೇಲೆ ಭ್ರಷ್ಟಾಚಾರ ಆರೋಪ ಹೊರಿಸಿದರು. ನನ್ನ ಮನೆಗೆ ಕಲ್ಲು ಹೊಡೆದ್ರು, ಯಡಿಯೂರಪ್ಪ ಬರ್ತಾರೆಂದು ಪೆಂಡಾಲ್ ಸುಟ್ಟರು, ನನ್ನ ಮೇಲೆ 100 ಕೇಸ್ಗಳನ್ನು ಹಾಕಿಸಿದ್ರು. ಆದ್ರೆ, ನೀವು ಒಂದು ಹೆಜ್ಜೆ ಮುಂದೆ ಇಟ್ರೆ ನಾನು ನೂರು ಹೆಜ್ಜೆ ಮುಂದಿರುತ್ತೇನೆ" ಎಂದು ಮಾಜಿ ಶಾಸಕ ಡಿಜಿ ಶಾಂತನಗೌಡ ವಿರುದ್ಧ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ:ಶಾಸಕ ಎಂಪಿ ರೇಣುಕಾಚಾರ್ಯ ತಾಕತ್ ಇರುವ ಹೊನ್ನಾಳಿ ಹುಲಿ: ಸಿಎಂ ಬೊಮ್ಮಾಯಿ