ದಾವಣಗೆರೆ: ಐದು ವರ್ಷದ ಮಗಳೊಂದಿಗೆ ತಾಯಿಯೊಬ್ಬಳು ಸೂಳೆಕೆರೆಗೆ (ಶಾಂತಿಸಾಗರ) ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಕೆರೆಬಿಳಚಿ ಬಳಿ ಇರುವ ಐತಿಹಾಸಿಕ ಪ್ರವಾಸಿ ತಾಣ ಸೂಳೆಕೆರೆಯಲ್ಲಿ ನಡೆದಿದೆ. ಕವಿತಾ (27) ಹಾಗೂ ನಿಹಾರಿಕಾ (5) ಆತ್ಮಹತ್ಯೆ ಮಾಡಿಕೊಂಡ ತಾಯಿ ಹಾಗೂ ಮಗಳು. ಮೃತ ಕವಿತಾ ಚನ್ನಗಿರಿ ತಾಲೂಕಿನ ಹೊನ್ನೆಬಾಗಿ ಗ್ರಾಮದ ನಿವಾಸಿ ಮಂಜುನಾಥ ಎಂಬುವರ ಪತ್ನಿ ಎಂದು ತಿಳಿದು ಬಂದಿದೆ.
ಕಳೆದ ಶುಕ್ರವಾರ ಮೃತ ಮಗಳು ನಿಹಾರಿಕಾಳೊಂದಿಗೆ ಮೃತ ಕವಿತಾ ಕಾಣೆಯಾಗಿದ್ದರು. ತನ್ನ ಹೆಂಡತಿ ಕಾಣೆಯಾಗಿದ್ದಾಳೆ ಎಂದು ಪತಿ ಮಂಜುನಾಥ್ ಚನ್ನಗಿರಿ ಪೊಲೀಸ್ ಠಾಣೆಗೆ ದೂರು ನೀಡಿ ಪತ್ನಿಯನ್ನು ಹುಡುಕಿಕೊಡುವಂತೆ ಮನವಿ ಮಾಡಿದ್ದರು. ದುರಂತ ಎಂದರೆ ಇಂದು ಸೂಳೆಕೆರೆಯಲ್ಲಿ ತಾಯಿ ಹಾಗೂ ಮಗಳ ಶವ ಪತ್ತೆಯಾಗಿದೆ. ಇನ್ನು ಮೃತ ಕವಿತಾ ಸೂಳೆಕೆರೆಗೆ (ಶಾಂತಿ ಸಾಗರ) ಹಾರುವ ಮುನ್ನ ಮಗಳು ನಿಹಾರಿಕಾ ದುಪ್ಪಟ್ಟಾದಿಂದ ಕಟ್ಟಿಕೊಂಡು ಕೆರೆಗೆ ಹಾರಿದ್ದರು ಎನ್ನಲಾಗಿದೆ.
ಮೂಲತಃ ಎರೇಹಳ್ಳಿಯ ನಿವಾಸಿಯಾದ ಕವಿತಾ ಅವರು ಆರು ವರ್ಷದ ಹಿಂದೆ ಹೊನ್ನೆಬಾಗಿ ಮಂಜುನಾಥ ಅವರೊಂದಿಗೆ ಮದುವೆ ಆಗಿದ್ದರು. ದಂಪತಿಗೆ ಐದು ವರ್ಷದ ನಿಹಾರಿಕಾ ಎನ್ನುವ ಒಬ್ಬ ಮಗಳು ಇದ್ದಳು. ಇದ್ದಕ್ಕಿದ್ದಂತೆ ಇದೀಗ ಕವಿತಾ ತನ್ನ ಮಗಳೊಂದಿಗೆ ಕೆರೆಗೆ ಹಾರಿ ಸಾವನಪ್ಪಿರುವುದು ಇಡೀ ಕುಟುಂಬದವರನ್ನು ಕಂಗಾಲಾಗುವಂತೆ ಮಾಡಿದ್ದು, ಆಕಾಶವೇ ಕಳಚಿ ಬಿದ್ದಂತೆ ಆಗಿದೆ.
ವರದಕ್ಷಿಣೆ ಕಿರುಕಳ ಆರೋಪ: ಕಳೆದ ಹಲವಾರು ವರ್ಷಗಳಿಂದ ಪತಿ ಹಾಗೂ ಅವರ ಮನೆಯವರು ಕವಿತಾಗೆ ನಿರಂತರ ವರದಕ್ಷಿಣೆ ಕಿರುಕಳ ನೀಡುತ್ತಿದ್ದರು ಎಂಬ ಆರೋಪವೂ ಇದೀಗ ಕೇಳಿ ಬಂದಿದೆ. ಇದೇ ವಿಚಾರವಾಗಿ ಪತಿ ಹಾಗೂ ಪತಿ ಮನೆಯವರ ಕಿರುಕುಳಕ್ಕೆ ಬೇಸತ್ತು ಕವಿತಾ ಆತ್ಮಹತ್ಯೆ ಮಾಡಿಕೊಂಡಿದ್ದಾರಾ ಎಂಬ ಅನುಮಾನಗಳಿಗೂ ಎಡೆಮಾಡಿಕೊಟ್ಟಿದೆ ಎನ್ನುವುದು ಕವಿತಾ ಸಂಬಂಧಿಕರ ಅನುಮಾನ ವ್ಯಕ್ತಪಡಿಸಿದ್ದಾರೆ. ಇನ್ನೊಂದೆಡೆ ನಮ್ಮ ಮಗಳಿಗೆ ಕಿರುಕುಳ ನೀಡಲಾಗಿದೆ ಎಂದು ಕವಿತಾಳ ತವರು ಮನೆಯವರು, ಕವಿತಾ ಗಂಡ ಹಾಗೂ ಕುಟುಂಬದವರ ವಿರುದ್ಧ ಪೊಲೀಸರಿಗೆ ದೂರು ಕೂಡಾ ನೀಡಿದ್ದಾರೆ. ಈ ಸಂಬಂಧ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಇವರ ತನಿಖೆ ಬಳಿಕವವಷ್ಟೇ ಆತ್ಮಹತ್ಯೆಗೆ ಕಾರಣ ಏನು ಎನ್ನುವುದು ಬಹಿರಂಗವಾಗಬೇಕಿದೆ.
ಇದನ್ನೂ ಓದಿ :ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ: ಡೆತ್‌ನೋಟ್ ಆಧರಿಸಿ ಏಳು ಜನರ ವಿರುದ್ಧ ಎಫ್ಐಆರ್ ದಾಖಲು