ಬೆಂಗಳೂರು/ದಾವಣಗೆರೆ/ತುಮಕೂರು:ತಾಯ್ತನ ಎನ್ನೋದೇ ಒಂದು ಅದ್ಭುತ ಅನುಭವ. ಹೆಣ್ಣು ತನ್ನ ಜೀವನದಲ್ಲೇ ಸಾರ್ಥಕತೆ ಭಾವನೆ ಹೊಂದುವ ಸಮಯವದು. ಹಾಗಾಗಿ ಈ ಸಂದರ್ಭದಲ್ಲಿ ಗರ್ಭಿಣಿಯರು, ಬಾಣಂತಿಯರಿಗೆ ಅತ್ಯುತ್ತಮ ವೈದ್ಯಕೀಯ ಸೇವೆ ದೊರೆಯಲೇಬೇಕು. ಇತ್ತೀಚಿನ ದಿನಗಳಲ್ಲಿ ಗರ್ಭಿಣಿಯರು ಹೆಚ್ಚಿನ ಸಂಖ್ಯೆಯಲ್ಲಿ ಸರ್ಕಾರಿ ಆಸ್ಪತ್ರೆಗಳ ಮೊರೆ ಹೋಗುತ್ತಿದ್ದಾರೆ. ಇದಕ್ಕೆ ಕೆಲ ಜಿಲ್ಲೆಗಳು ಸಾಕ್ಷಿಯಾಗಿವೆ.
ಬೆಂಗಳೂರಿನಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಪರಿಣಾಮ ಗರ್ಭಿಣಿಯರಿಗೆ ಚಿಕಿತ್ಸೆ ನೀಡೋದು ಕೂಡಾ ಸವಾಲಾಗಿದೆ. ಯಾಕೆಂದರೆ, ಹೆಚ್ಚಿನ ಆಸ್ಪತ್ರೆಗಳೀಗ ಕೋವಿಡ್ ಆಸ್ಪತ್ರೆಗಳಾಗಿ ಬದಲಾಗಿವೆ. ಹಾಗಾಗಿ ಸದ್ಯ ನಗರದ ವಾಣಿವಿಲಾಸ್ ಆಸ್ಪತ್ರೆಯಲ್ಲೇ ಗರ್ಭಿಣಿಯರನ್ನು ದಾಖಲಿಸಲಾಗುತ್ತಿದೆ. ಒಂದು ವೇಳೆ ಸೋಂಕು ತಗುಲಿದ್ದರೆ ವಿಕ್ಟೋರಿಯಾ ಅಥವಾ ಗೋಷಲ್ ಆಸ್ಪತ್ರೆಗೆ ಕಳುಹಿಸಲಾಗುತ್ತಿದೆ. ಹೆರಿಗೆ ಆದ ಬಳಿಕ ಪಾಸಿಟಿವ್ ಎಂದು ವರದಿ ಬಂದ್ರೆ ಅಂಥವರಿಗಾಗಿಯೇ ಐಸೋಲೇಷನ್ ವಾರ್ಡ್ಗಳಿವೆ.
ದಾವಣಗೆರೆಯಲ್ಲಿ ಗರ್ಭಿಣಿಯರು ಹೆಚ್ಚಾಗಿ ಸರ್ಕಾರಿ ಆಸ್ಪತ್ರೆಗಳನ್ನೇ ನೆಚ್ಚಿಕೊಂಡಿದ್ದಾರೆ. ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ ತಿಂಗಳಿಗೆ 800 ರಿಂದ 900 ಹೆರಿಗೆಗಳಾಗುತ್ತಿದ್ದು, ನಮಗೆ ಬೇಕಾದ ಪೂರಕ ವಾತಾವರಣವಿದೆ ಅಂತಾರೆ ಗರ್ಭಿಣಿ, ಬಾಣಂತಿಯರು.