ಹರ್ಲಾಪುರದಲ್ಲಿ ನಮ್ಮೂರ ಮಸೀದಿ ನೋಡ ಬನ್ನಿ ಎಂಬ ವಿಶೇಷ ಕಾರ್ಯಕ್ರಮ ದಾವಣಗೆರೆ:ಜಿಲ್ಲೆಯ ಹರಿಹರ ನಗರದ ಹರ್ಲಾಪುರದಲ್ಲಿ ಮುಸ್ಲಿಂ ಚಿಂತಕರು ಸೇರಿ ಸಮಾಜದಲ್ಲಿ ಶಾಂತಿ ನೆಲೆಸಲು ನಮ್ಮೂರ ಮಸೀದಿ ನೋಡಬನ್ನಿ ಎಂಬ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಈ ವಿನೂತನ ಕಾರ್ಯಕ್ರಮಕ್ಕೆ ಸಾಕಷ್ಟು ಜನ ಅನ್ಯಧರ್ಮೀಯರು ಮಸೀದಿ ದರ್ಶನಕ್ಕೆ ಆಗಮಿಸಿ ಮಾಹಿತಿಯನ್ನು ಪಡೆದರು. ಹರಿಹರ ನಗರದ ಹರ್ಲಾಪುರದಲ್ಲಿರುವ ಮುಬಾರಕ್ ಮಸೀದಿಯನ್ನು ಇಂದು ಅನ್ಯಧರ್ಮೀಯರ ದರ್ಶನಕ್ಕಾಗಿಯೇ ಸೀಮಿತಗೊಳಿಸಲಾಗಿತ್ತು. ಈ ವೇಳೆ ಮಸೀದಿ ಹಾಗೂ ಧಾರ್ಮಿಕ ಆಚರಣೆ ಬಗ್ಗೆ ಮುಸ್ಲಿಂ ಧರ್ಮದ ಚಿಂತಕರು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಾಜಿ ಶಾಸಕ ಎಚ್ ಎಸ್ ಶಿವಶಂಕರ ಮಾತನಾಡಿ, ದೇಶದಲ್ಲಿ ಧರ್ಮ ಹಾಗು ದೇವರ ಹೆಸರಿನ ಮೇಲೆ ಜನರ ಮನಸ್ಸು ಮತ್ತು ಭಾವನೆಗಳನ್ನು ವಿಭಜಿಸುವ ಕೆಲಸ ನಡೆಯುತ್ತಿವೆ. ಆದ್ರೆ ಈ ರೀತಿ ಮಸೀದಿ ದರ್ಶನ ಮಾಡಿರುವುದು ವಿಶೇಷ, ದೇವರು ಒಬ್ಬನೇ ನಾಮ ಹಲವು ಎಂಬ ಮನೋಭಾವ ಪ್ರತಿಯೊಬ್ಬರಲ್ಲಿ ಬರಬೇಕಿದೆ ಎಂದರು.
ಮಸೀದಿಗೆ ಭೇಟಿ ನೀಡಿದ್ದ ಸರೋಜಮ್ಮ ಎಂಬುವರು ಮಾತನಾಡಿ, ನಾವು ದರ್ಗಾಕ್ಕೆ ಮಾತ್ರ ಭೇಟಿ ಕೊಟ್ಟಿದ್ದೇವೆ, ಅದ್ರೇ ಮಸೀದಿಗೆ ಇದೇ ಮೊದಲ ಬಾರಿ ಆಗಮಿಸಿ ದೇವರ ದರ್ಶನ ಮಾಡಿದ್ದೇವೆ. ಮಸೀದಿ ಮಾಹಿತಿಯನ್ನು ಅಪ್ಪಟ ಕನ್ನಡದಲ್ಲೇ ನೀಡಿದ್ದು ಖುಷಿ ತಂದಿದೆ ಎಂದು ಹೇಳಿದರು.
ಮಸೀದಿಗೆ ಕುರಿತು ಜನರಿಗೆ ಮಾಹಿತಿ: ಮಸೀದಿಯಲ್ಲಿ ನಮಾಜ್ ಮಾಡುವ ಮುನ್ನ ಮೈಕ್ ನಲ್ಲಿ ಕೂಗುವ ಅಜಾನ್ ಅರ್ಥ, ನಮಾಜಿಗೆ ತೆರಳುವ ಮುನ್ನ ಮಸೀದಿಯಲ್ಲಿ ಕೈಕಾಲು ಮುಖ ತೊಳೆದುಕೊಳ್ಳುವ ಮಹತ್ವ, ಕುರಾನ್ ಮಹತ್ವ, ಶುಕ್ರವಾರ ವಿಶೇಷ ಪ್ರಾರ್ಥನೆಯ ಮಹತ್ವ, ರಂಜಾನ್ ಉಪವಾಸ ಹಾಗೂ ಹಜ್ ಯಾತ್ರೆ ಬಗ್ಗೆ ಮುಸ್ಲಿಂ ಧರ್ಮದ ಚಿಂತಕರು ವಿವರಿಸಿದರು.
ಇನ್ನು, ಈ ಕಾರ್ಯಕ್ರಮದಲ್ಲಿ ಹರಿಹರ ಶಾಸಕ ಎಸ್ ರಾಮಪ್ಪ, ಮಾಜಿ ಶಾಸಕ ಎಚ್ ಎಸ್ ಶಿವಶಂಕರ ಹಾಗೂ ಬಿಜೆಪಿ ಮುಖಂಡ ಚಂದ್ರಶೇಖರ ಪೂಜಾರ ಸೇರಿದಂತೆ ಪ್ರಮುಖರು ಭಾಗವಹಿಸಿದ್ದರು.
ಇದನ್ನೂ ಓದಿ:ವೀರಶೈವ ಲಿಂಗಾಯತ ಮಹಾಸಭಾ ಮಹಾ ಅಧಿವೇಶನ ಫೆಬ್ರವರಿಗೆ ಮುಂದೂಡಿಕೆ : ಶಾಮನೂರು