ದಾವಣಗೆರೆ:ಆಧುನಿಕ ಹಾಗೂ ಪಾಶ್ಚಿಮಾತ್ಯ ಆಟಗಳ ಮಧ್ಯದಲ್ಲೂ ಭಾರತದ ದೇಸಿಯ ಕ್ರೀಡೆಗಳು ತಮ್ಮ ಜನಪ್ರಿಯತೆಯನ್ನು ಇಂದಿಗೂ ಉಳಿಸಿಕೊಂಡು ಬಂದಿವೆ. ಹೀಗಾಗಿ ಸದಾ ಕಾಲೇಜು, ಪರೀಕ್ಷೆ, ಪ್ರಾಜೆಕ್ಟ್ ವರ್ಕ್ ಎಂದು ಬ್ಯೂಸಿಯಾಗಿರುತ್ತಿದ್ದ ವೈದ್ಯಕೀಯ ವಿದ್ಯಾರ್ಥಿಗಳು, ಮಳೆಗಾಲದ ಮೋಡ ಮುಸುಕಿದ ವಾತಾವರಣದಲ್ಲಿ ಕೆಸರು ಗದ್ದೆ ಓಟ, ಹಗ್ಗ- ಜಗ್ಗಾಟ ಸೇರಿದಂತೆ ಹಲವು ದೇಸಿ ಕ್ರೀಡೆಗಳನ್ನು ಆಡುವ ಮೂಲಕ ಸಖತ್ ಎಂಜಾಯ್ ಮಾಡಿದರು.
ದಾವಣಗೆರೆಯ ಜೆಜೆಎಂ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳ ಸಂಘದಿಂದ ಜೆಜೆಎಂ ಕಾಲೇಜು ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ವರ್ಗದವರಿಗೆ ಮಾನ್ಸೂನ್ ಫಿಯೆಸ್ಟಾ ಕ್ರೀಡೆಗಳನ್ನು ಇಂದಿನಿಂದ ಹಮ್ಮಿಕೊಳ್ಳಲಾಗಿದೆ. ದಾವಣಗೆರೆ ಹೊರವಲಯದಲ್ಲಿರುವ ಗಾಜಿನ ಮನೆಯ ಕೂಗಳತೆ ದೂರದಲ್ಲಿರುವ ಖಾಸಗಿ ಜಮೀನಿನಲ್ಲಿ ದೇಸಿ ಆಟಗಳ ಕ್ರೀಡಾಕೂಟವನ್ನು ಆಯೋಜನೆ ಮಾಡಲಾಗಿದೆ. ಇಂದಿನಿಂದ ಆರಂಭವಾಗಿರುವ ಈ ಮಾನ್ಸೂನ್ ದೇಸಿ ಕ್ರೀಡೆ ಎರಡು ವಾರಗಳ ಕಾಲ ನಡೆಯಲಿದೆ.
ಜೆಜೆಎಂ ಮೆಡಿಕಲ್ ಕಾಲೇಜಿನ ನೂರಾರು ಎಂಬಿಬಿಎಸ್ ವಿದ್ಯಾರ್ಥಿಗಳು, ಕೆಸರು ಗದ್ದೆಯಲ್ಲಿ ತಮ್ಮಿಷ್ಟದ ಆಟವಾಡಿ ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಇನ್ನು ಕೆಸರು ಗದ್ದೆ ಓಟದಲ್ಲಿ ವಿದ್ಯಾರ್ಥಿಗಳು ಭಾಗಿಯಾಗಿ ಗೆಲುವಿನ ದಡ ಸೇರಲು ಹರಸಾಹಸ ಪಟ್ಟರು. ಇದರ ಜೊತೆಗೆ ಕೆಸರಿನಲ್ಲೇ ವಾಲಿಬಾಲ್ ಕೂಡ ಆಡಿಸಿದ್ದು, ಎರಡು ತಂಡದ ವಿದ್ಯಾರ್ಥಿಗಳು ಕೆಸರಿನಲ್ಲಿ ಮಿಂದೆದ್ದು ಜಿದ್ದಾಜಿದ್ದಿನಿಂದ ಸೆಣಸಿದರು.
ವಿದ್ಯಾರ್ಥಿನಿ ಶ್ರೇಯಾ ಮಾತನಾಡಿ, ಎಂಬಿಬಿಎಸ್ ವಿದ್ಯಾರ್ಥಿಗಳು ಬರೀ ಓದಿನ ಮೇಲೆ ಹೆಚ್ಚು ಗಮನ ಹರಿಸುತ್ತೇವೆ, ಆದರೆ ಇಂದು ಮಾನ್ಸೂನ್ ಫಿಯೆಸ್ಟಾ ಆರಂಭವಾಗಿದೆ. ಇಂದು ಮೊದಲನೇ ದಿನವಾಗಿದ್ದು ಕೆಸರು ಗದ್ದೆಯಲ್ಲಿ ಕೆಸರು ಗದ್ದೆ ಓಟ, ಕೆಸರು ಗದ್ದೆಯಲ್ಲಿ ವಾಲಿಬಾಲ್ ಮತ್ತು ಥ್ರೋಬಾಲ್, ಹಗ್ಗ -ಜಗ್ಗಾಟ ನಡೆಯುತ್ತಿದೆ. ತುಂಬಾ ಚೆನ್ನಾಗಿ ಆಯೋಜನೆ ಮಾಡಿದ್ದಾರೆ, ಪ್ರತಿ ಬ್ಯಾಚ್ನಿಂದ ಎರಡು ತಂಡಗಳು ಕ್ರೀಡೆಗಳಲ್ಲಿ ಭಾಗವಹಿಸುತ್ತಿವೆ ಎಂದರು.