ಹರಿಹರ:ಚುನಾವಣಾ ಸಂದರ್ಭದಲ್ಲಿ ಬಿಜೆಪಿ ಸರ್ಕಾರ ದೇಶದಲ್ಲಿ ಎರಡು ಕೋಟಿ ಉದ್ಯೋಗ ನೀಡುತ್ತೇವೆ ಎಂದು ಭರವಸೆ ನೀಡಿತ್ತು. ಆದರೆ ಈವರೆಗೂ ಎಷ್ಟು ಜನರಿಗೆ ಉದ್ಯೋಗ ನೀಡಿದ್ದಾರೆ ಎಂಬುದನ್ನು ಪದವೀಧರರು ಅರ್ಥ ಮಾಡಿಕೊಳ್ಳಬೇಕು ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ಹೇಳಿದರು.
ನಗರದಲ್ಲಿ ಜೆಡಿಎಸ್ ಪಕ್ಷದಿಂದ ಆಯೋಜಿಸಲಾಗಿದ್ದ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು,
2008ರ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ನನಗೆ ಶಿಕ್ಷಣ ಸಚಿವ ಆಗುವ ಅವಕಾಶ ಸಿಕ್ಕಿತು. ಆ ಸಂದರ್ಭದಲ್ಲಿ ರಾಜ್ಯದ ಒಟ್ಟು 54 ಸಾವಿರ ಶಿಕ್ಷಕರ ನೇಮಕಾತಿ ಮಾಡಲಾಯಿತು. ಆ ಸಂದರ್ಭದಲ್ಲಿ ಶಿಕ್ಷಕರ ವರ್ಗಾವಣೆಯಲ್ಲಿ ವ್ಯಾಪಕವಾಗಿ ನಡೆಯುತ್ತಿದ್ದ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲಾಯಿತು. 9,896 ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಮುಂಬಡ್ತಿ ನೀಡಲಾಯಿತು. ರಾಜ್ಯದಲ್ಲಿ ಅನುದಾನ ರಹಿತ ಶಾಲೆಗಳಿಗೆ ಅನುದಾನ ವಿಸ್ತರಣೆ ಮಾಡಿದ ಪರಿಣಾಮ ಸುಮಾರು 30 ಸಾವಿರ ಶಿಕ್ಷಕರಿಗೆ ಅನುಕೂಲವಾಯಿತು ಎಂದರು.
ಹೀಗೆ ನಮ್ಮ ಜೆಡಿಎಸ್ ಸರ್ಕಾರದ ಸಂದರ್ಭದಲ್ಲಿ ಹಲವಾರು ಕ್ಷೇತ್ರಗಳಲ್ಲಿ ಉದ್ಯೋಗ ಕಲ್ಪಿಸಲಾಯಿತು. ಇದನ್ನು ಶಿಕ್ಷಕರು ಹಾಗೂ ಪದವೀಧರರು ಮರೆಯಬಾರದು. ಯಾರು ಕೆಲಸವನ್ನು ಮಾಡುತ್ತಾರೆ ಎಂಬುದನ್ನು ತಿಳಿದು ಮತ ಚಲಾಯಿಸಬೇಕು ಎಂದರು.