ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ದಾವಣಗೆರೆ: ಜಗದೀಶ್ ಶೆಟ್ಟರ್ ನಮ್ಮ ಬೀಗರು, ಅವರನ್ನು ನಮ್ಮ ಮಗ ಪಕ್ಷಕ್ಕೆ ಕರೆಯುತ್ತಾನೆ, ಅವರು ಕಾಂಗ್ರೆಸ್ಗೆ ಬಂದರೆ ಅವರಿಗೆ ಹುಬ್ಬಳ್ಳಿ ಸೆಂಟ್ರಲ್ ಕ್ಷೇತ್ರದ ಟಿಕೆಟ್ ಫಿಕ್ಸ್ ಎಂದು ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ಹೊಸ ಬಾಂಬ್ ಸಿಡಿಸಿದರು.
ನಗರದ ತಮ್ಮ ನಿವಾಸದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜಗದೀಶ್ ಶೆಟ್ಟರ್ ನಮ್ಮ ಬೀಗರು. ನಾನು, ಅವರು ಪಕ್ಷಕ್ಕೆ ಬರುವಂತೆ ಅವರ ಕಡೆ ಮಾತನಾಡಿಲ್ಲ. ಆದ್ರೂ ಅವರು ಕಾಂಗ್ರೆಸ್ ಪಕ್ಷಕ್ಕೆ ಬರಬಹುದು, ಬಿಜೆಪಿಯವರು ಇಂತಹ ಕೆಲಸ ಮಾಡಿ ಎಲ್ಲವನ್ನು ಕಳೆದುಕೊಳ್ಳುತ್ತಾರೆ, ಬಿಜೆಪಿಗೆ ರಾಜ್ಯದಲ್ಲಿ 60 ಸೀಟ್ ಕೂಡ ಬರೋಲ್ಲ ಎಂದು ಭವಿಷ್ಯ ನುಡಿದರು.
ಇನ್ನು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕಾಂಗ್ರೆಸ್ ಪಕ್ಷಕ್ಕೆ ಬಂದರೆ ನಾವು ಅವರಿಗೆ ಟಿಕೆಟ್ ಕೊಡಲೇಬೇಕಾಗುತ್ತದೆ. ಟಿಕೆಟ್ ಕೊಟ್ಟರೆ ಅವರು ಕಾಂಗ್ರೆಸ್ ಸೇರೋದು ಪಕ್ಕಾ, ಕಾಂಗ್ರೆಸ್ಗೆ ಅವರು ಬರೋದು ಕೂಡ ಪಕ್ಕಾ, ಆದ್ದರಿಂದ ನಮ್ಮ ಮಗ ಬೀಗರು ಕಾಂಗ್ರೆಸ್ಗೆ ಬರುವಂತೆ ಅವರ ಬಳಿ ಮಾತನಾಡುತ್ತಾ ಇದ್ದಾರೆ, ಕಾದು ನೋಡೋಣ ಎಂದರು. ಇದಲ್ಲದೆ ಜಗದೀಶ್ ಶೆಟ್ಟರ್ ಅವರೊಂದಿಗೆ ನಮ್ಮ ಕಾಂಗ್ರೆಸ್ ಹಿರಿಯ ನಾಯಕರು ಈಗಾಗಲೇ ಮಾತನಾಡಿದ್ದಾರೆ. ಲಿಂಗಾಯತ ನಾಯಕರು ಒಬ್ಬೊಬ್ಬರಾಗಿ ಕಾಂಗ್ರೆಸ್ಗೆ ಬರುತ್ತಿದ್ದಾರೆ, ಮುಂದೆ ಏನಾಗುತ್ತೋ ಕಾಯ್ದು ನೋಡೋಣ, ರಾಜ್ಯದಲ್ಲಿ ಕಾಂಗ್ರೆಸ್ ಬಂಪರ್ ಹೊಡಿಯಲಿದೆ ಎಂದರು.
ಶೆಟ್ಟರ್ ಈ ನಿರ್ಧಾರಕ್ಕೆ ಟಿಕೆಟ್ ನಿರಾಸೆಯೇ ಕಾರಣವಾಯಿತಾ: ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆ ಬಿಜೆಪಿ ಪಕ್ಷ ತಮ್ಮ ಅಭ್ಯರ್ಥಿಗಳ 2 ಪಟ್ಟಿಗಳನ್ನು ಬಿಡುಗಡೆ ಮಾಡಿತ್ತು. ಆದರೆ ಇದರೆಡರಲ್ಲೂ ಶೆಟ್ಟರ್ ಅವರಿಗೆ ಟಿಕೆಟ್ ಘೋಷಣೆಯಾಗಿರಲಿಲ್ಲ. ಹೀಗಾಗಿ ಜಗದೀಶ್ ಅವರು ಮೊನ್ನೆಯಿಂದಲೂ ತಮಗೆ ಬಿಜೆಪಿ ಪಕ್ಷ ಟಿಕೆಟ್ ನೀಡಿಯೇ ನೀಡುತ್ತದೆ ಎಂಬ ಭರವಸೆ ಹೊಂದಿದ್ದಲ್ಲದೇ ರಾಜ್ಯದ ಜನತೆಗೂ ಇದನ್ನೇ ತಿಳಿಸಿದ್ದರು.
ಆದರೇ ಈ ಭರವಸೆ ಈಡೇರುವಂತೆ ಕಾಣದೇ ಇರುವುದನ್ನು ಅರಿತ ಶೆಟ್ಟರ್ ಅವರು, ನಾನು ನನ್ನ ಶಾಸಕ ಸ್ಥಾನಕ್ಕೆ ಮತ್ತು ಬಿಜೆಪಿ ಪಕ್ಷಕ್ಕೆ ರಾಜೀನಾಮೆ ನೀಡುತ್ತೇನೆಂದು ನಿನ್ನೆ ಘೋಷಣೆ ಮಾಡಿದ್ದರು. ಅದರಂತೆ ಇಂದು ಬೆಳಗ್ಗೆ ಮೊದಲು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಬಳಿ ಹೋಗಿ ರಾಜೀನಾಮೆ ಪತ್ರ ನೀಡಿದರು. ಮಾಹಿತಿಗಳ ಪ್ರಕಾರ ಕಾಂಗ್ರೆಸ್ ಮುಖಂಡರು ಶೆಟ್ಟರ್ ಅವರನ್ನು ತಮ್ಮ ಪಕ್ಷಕ್ಕೆ ಸೇರಿಸಿಕೊಳ್ಳುವ ಕುರಿತು ಅವರನ್ನು ಮನವೊಲಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಆದರೆ ರಾಜೀನಾಮೆ ನಂತರ ಅವರ ನಡೆ ಯಾವ ಕಡೆ ಎಂಬುದನ್ನು ಕಾದು ನೋಡಬೇಕಿದೆ.
ಶೆಟ್ಟರ್ಗಾಗಿ ಆಫರ್ಗಳನ್ನು ನೀಡಿದ್ದ ಬಿಜೆಪಿ ಹೈಕಮಾಂಡ್:ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಹುಬ್ಬಳ್ಳಿ ಸೆಂಟ್ರಲ್ ಕ್ಷೇತ್ರದಿಂದ ಟಿಕೆಟ್ಗಾಗಿ ಪಟ್ಟು ಹಿಡಿದಿದ್ದರು. ಹೀಗಾಗಿ ಇವರನ್ನು ಸಮಧಾನಗೊಳಿಸಲು ಅವರ ನಿವಾಸಕ್ಕೆ ಬಿಜೆಪಿ ಪಕ್ಷದ ಮುಖಂಡರುಗಳು ನಿನ್ನೆ ರಾತ್ರಿ ಭೇಟಿ ನೀಡಿದ್ದರು. ಬಳಿಕ ಇವರಿಗೆ ಚುನಾವಣೆಗೆ ಸ್ಪರ್ಧೆ ಮಾಡದೇ ಇರಲು ಕೇಂದ್ರ ಸಚಿವ ಸ್ಥಾನದಿಂದ ಹಿಡಿದು ರಾಜ್ಯಪಾಲರನ್ನಾಗಿ ನೇಮಕ ಮಾಡುವ ತನಕ ಉತ್ತಮ ಹುದ್ದೆಗಳ ಆಫರ್ಗಳನ್ನು ನೀಡಿದ್ದರು. ಆದರೆ, ಶೆಟ್ಟರ್ ಅವರು ಇವೆಲ್ಲವನ್ನು ತಿರಸ್ಕಾರ ಮಾಡಿ, ಪಕ್ಷದಿಂದ ಹೊರನಡೆದಿದ್ದಾರೆ.
ಇದನ್ನೂ ಓದಿ:ಇಟ್ಟ ಹೆಜ್ಜೆಯಿಂದ ಹಿಂದೆ ಸರಿಯಲ್ಲ ಎಂದ ಶೆಟ್ಟರ್: ಬೊಮ್ಮಾಯಿ ನಿವಾಸದಲ್ಲಿ ಬಿಜೆಪಿ ನಾಯಕರ ರಹಸ್ಯ ಸಭೆ