ದಾವಣಗೆರೆ: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಹೊಲದ ಉತಾರ ಪಡೆಯಲು, ತಪ್ಪುಗಳ ತಿದ್ದುಪಡಿಗೆ ಇನ್ಮುಂದೆ ಅರ್ಜಿ ಹಿಡಿದು ಅಲೆದಾಡಬೇಕಿಲ್ಲ, ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಸ್ಥಿರ ಸ್ವತ್ತಿನ ಆಸ್ತಿ ಮಾಲೀಕರ ವಿವರವನ್ನು ಆನ್ಲೈನ್ ತಂತ್ರಾಂಶದಲ್ಲಿ ಅಳವಡಿಸಿ, ಗಣಕೀಕೃತ ಖಾತಾ ಉತಾರ ನೀಡಲು ಪಾಲಿಕೆ ಮುಂದಾಗಿದೆ.
ದಾವಣಗೆರೆಯಲ್ಲಿ ಆನ್ಲೈನ್ ಖಾತಾ ವಿತರಣೆಗೆ ಚಾಲನೆ ನೀಡಿದ ಶಾಸಕ ಎಸ್.ಎ ರವೀಂದ್ರನಾಥ್ ನಗರದ ಎಂಸಿಸಿಎ ಬ್ಲಾಕ್ ಆಶ್ರಯ ಆಸ್ಪತ್ರೆ ಬಳಿ ಇರುವ ವಲಯ 3 ರಲ್ಲಿ ಖಾತಾ ವಿತರಣೆಗೆ ಶಾಸಕ ಎಸ್.ಎ ರವೀಂದ್ರನಾಥ್, ಪಾಲಿಕೆ ಆಯುಕ್ತ ಮಂಜುನಾಥ್ ಬಳ್ಳಾರಿ ಚಾಲನೆ ನೀಡಿದರು.
ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯ ಸುಮಾರು143.370 ಸ್ಥಿರಾಸ್ತಿಗಳ ಪೈಕಿ ವಲಯ 3ರ ವ್ಯಾಪ್ತಿಯ 10 ವಾರ್ಡ್ಗಳು 66.155 ಸ್ಥಿರಾಸ್ತಿ ವಿವರಗಳನ್ನು ಮೊದಲ ಹಂತವಾಗಿ ಆನ್ಲೈನ್ ತಂತ್ರಾಂಶದಲ್ಲಿ ಅಳವಡಿಸಲಾಗಿದೆ. ಅರ್ಜಿ ನೀಡಿದ ತಕ್ಷಣ ಉತಾರ ಅರ್ಜಿದಾರರ ಕೈ ಸೇರಲಿದೆ. ಇನ್ನೂ ತಿದ್ದುಪಡಿಗೂ ಸಹ ಇಲ್ಲಿ ಅವಕಾಶ ಕಲ್ಪಿಸಲಾಗಿದೆ.
ಈ ಹಿಂದೆ ಕೈಬರಹದ ಖಾತಾ ಉತಾರ ಕೊಡಲಾಗುತ್ತಿತ್ತು, ಹೆಸರು ನಮೂದಿಸುವಾಗ ಕಾಗುಣಿತ ದೋಷ ಸೇರಿದಂತೆ ಹಲವು ತಪ್ಪುಗಳು ಆಗುತ್ತಿದ್ದವು, ಸಾಧ್ಯವಾದಷ್ಟು ತಪ್ಪುಗಳು ಆಗದಂತೆ ತಂತ್ರಾಂಶ ರೂಪಿಸಲಾಗಿದೆ. ಆರಂಭದಲ್ಲಿ ಪಾಲಿಕೆಯ 10 ವಾರ್ಡ್ಗಳಲ್ಲಿ ಸ್ಥಿರ ಸ್ವತ್ತಿನ ಆಸ್ತಿ ಮಾಲೀಕರ ವಿವರಗಳನ್ನು ಆನ್ಲೈನ್ ತಂತ್ರಾಂಶದಲ್ಲಿ ಅಳವಡಿಸಲಾಗಿದೆ.