ಹರಿಹರ(ದಾವಣಗೆರೆ) : ಸರ್ಕಾರ ಕೂಡಲೇ ಕಾರ್ಮಿಕ ನೀತಿ ತಿದ್ದುಪಡಿ ವಾಪಸ್ ಪಡೆಯಬೇಕು. ಇಲ್ಲವಾದರೆ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಶಾಸಕ ಎಸ್. ರಾಮಪ್ಪ ಕೇಂದ್ರಕ್ಕೆ ಎಚ್ಚರಿಕೆ ನೀಡಿದರು.
ನಗರದ ರಚನಾ ಕ್ರೀಡಾ ಟ್ರಸ್ಟ್ ಸಭಾಂಗಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೇಂದ್ರ ಸರಕಾರ ತೀರ್ಮಾನಿಸಿರುವ ಕಾರ್ಮಿಕ ಕಾಯ್ದೆಯ ಕೆಲವು ತಿದ್ದುಪಡಿಗಳಿಗೆ ಹೊರಟಿರುವುದು ಕಾರ್ಮಿಕ ಸಮುದಾಯಕ್ಕೆ ಮಾರಕವಾಗಲಿದೆ.
ಕೆಲಸದ ಅವಧಿಯನ್ನು 8 ರಿಂದ 12 ಗಂಟೆಗೆ ವಿಸ್ತರಣೆ. ನೂರಕ್ಕಿಂತ ಹೆಚ್ಚಿನ ಸಂಖ್ಯೆ ಕಾರ್ಮಿಕರಿರುವ ಕಾರ್ಖಾನೆಯನ್ನು ಮಾಲೀಕರು ಯಾವುದೇ ಸಂದರ್ಭದಲ್ಲಿ ಮುಚ್ಚಬಹುದು. ಕೆಲಸದಿಂದ ವಜಾ ಆದ ಕಾರ್ಮಿಕ ನ್ಯಾಯಾಲಯದ ಮೊರೆ ಹೋದರೆ ಆ ಅವಧಿಯ ವೇತನ ನೀಡದಿರುವುದು. ಕಾರ್ಮಿಕರ ಕಾಯ್ದೆಯ 44 ಕಾನೂನುಗಳಲ್ಲಿ 40 ರದ್ದುಪಡಿಸಿ ಕೇವಲ 4ಕ್ಕೆ ಸೀಮಿತಗೊಳಿಸಿರುವುದು. ಕಾರ್ಮಿಕರ ವೇತನ ಪಾವತಿಯಾಗದಿದ್ದಲ್ಲಿ ಊಟ, ವಸತಿ ಸೌಲಭ್ಯದಲ್ಲಿ ಉಲ್ಲಂಘನೆಯಾದಲ್ಲಿ ಯಾವುದೇ ಕಾನೂನಿನ ಸಹಾಯ ಪಡೆಯಲಾಗದಿರುವುದು. ಕಾಯ್ದೆ ತಿದ್ದುಪಡಿಯಿಂದ ಕಾರ್ಮಿಕರ ರಕ್ಷಣೆಗೆ ಇದ್ದ ಮಾರ್ಗಗಳೆಲ್ಲ ಮುಚ್ಚಿದಂತಾಗುತ್ತದೆ. ಮಾಲೀಕರ ಅಟ್ಟಹಾಸಕ್ಕೆ ಈ ತಿದ್ದುಪಡಿ ದಾರಿ ಮಾಡಿಕೊಡುತ್ತದೆ ಎಂದು ಆಕ್ರೋಶ ಹೊರಹಾಕಿದರು.
ಕೇಂದ್ರದ ಮಾದರಿಯನ್ನು ರಾಜ್ಯ ಸರ್ಕಾರವೂ ಅಳವಡಿಸಲು ಹೊರಟಿರುವುದು ವಿಪರ್ಯಾಸ. ಬಂಡವಾಳ ಶಾಹಿಗಳ ಪರ ಇರುವ ಕೇಂದ್ರ ಸರ್ಕಾರದ ನಿಲುವಿಗೆ ರಾಜ್ಯ ಸರ್ಕಾರವೈ ಬೆಂಬಲಿಸಿದಂತಾಗುತ್ತದೆ. ರಾಜ್ಯ ಸರ್ಕಾರ ಸುಗ್ರೀವಾಜ್ಞೆಗೆ ಮೊರೆ ಹೋಗಿರುವುದು ಸರಿಯಲ್ಲ. ರಾಜ್ಯ ಸರ್ಕಾರ ತನ್ನ ನಿಲುವನ್ನು ಬದಲಿಸಿಕೊಂಡು ಕಾರ್ಮಿಕರ ಹಿತರಕ್ಷಣೆ ಮಾಡಬೇಕು ಎಂದರು.