ದಾವಣಗೆರೆ: ಸಿಪಿಐ ಮೂಲಕ ಎಸ್ಪಿ ರಿಷ್ಯಂತ್ ಅವರಿಗೆ ಅವಾಜ್ ಹಾಕಿದ್ದ ಶಾಸಕ ರೇಣುಕಾಚಾರ್ಯ ಇಂದು ಅದರ ಬಗ್ಗೆ ಸ್ಪಷ್ಟನೆ ನೀಡಿದರು. ಹೊನ್ನಾಳಿ ತಾಲೂಕು ಅರಬಗಟ್ಟೆ ಕೋವಿಡ್ ಕೇರ್ ಸೆಂಟರ್ ನಲ್ಲಿ ಮಾತನಾಡಿದ ಅವರು, ನಾನು ಬಡವರ ಪರ, ಎತ್ತಿನಗಾಡಿ, ಬೈಕ್ ನಲ್ಲಿ ಮರಳು ಸಾಗಿಸುವುದನ್ನು ಪೊಲೀಸರು ಸೀಜ್ ಮಾಡಲು ಬಿಡುವುದಿಲ್ಲ ಎಂದರು.
ಶಾಸಕ ಎಂ ಪಿ ರೇಣುಕಾಚಾರ್ಯ ಸ್ಪಷ್ಟನೆ ಓದಿ: ನೀವೇನು ದೊಡ್ಡ ಹೀರೋ ಏನ್ರಿ..? ಅಕ್ರಮ ಮರಳು ಅಡ್ಡೆ ಮೇಲೆ ದಾಳಿ ಮಾಡಿದ ಎಸ್ಪಿ ವಿರುದ್ಧ ರೇಣುಕಾಚಾರ್ಯ ಗರಂ!
ಹೊನ್ನಾಳಿ ಸಿಪಿಐ ದೇವರಾಜ್ ಅವರಿಗೆ ಎತ್ತಿನಗಾಡಿ, ಬೈಕ್ ನಲ್ಲಿ ಮರಳು ಸಾಗಿಸುವರಿಗೆ ತೊಂದರೆ ಕೊಡಬೇಡಿ. ಅಂತಹ ಮರಳು ಸೀಜ್ ಮಾಡುವುದು ಬೇಡ ಎಂದು ಕಳೆದ ದಿನ ನಾನೇ ಹೇಳಿದ್ದೇನೆ. ಎತ್ತಿನಗಾಡಿ, ಬೈಕ್ ನಲ್ಲಿ ಮರಳು ತೆಗೆದುಕೊಂಡು ಹೋಗಲು ಸರ್ಕಾರದ ಅನುಮತಿ ಇದೆ. ಅಕ್ರಮ ಗಣಿಗಾರಿಕೆ, ಮರಳುಗಾರಿಕೆ ಮಾಡಿದರೆ ಸೀಜ್ ಮಾಡಲಿ, ನಾನು ಅದಕ್ಕೆ ಬೆಂಬಲ ಕೊಡುತ್ತೇನೆ ಎಂದು ಸ್ಪಷ್ಟಪಡಿಸಿದರು.
ಮಟ್ಕಾ, ಜೂಜಾಟ ಆಡುವವರನ್ನು ಸೀಜ್ ಮಾಡಿ ಎಂದು ಹೇಳಿದ್ದೇನೆ. ಅಕ್ರಮ ಮರಳುಗಾರಿಕೆಗೆ ನಾನು ವಿರೋಧ ವ್ಯಕ್ತಪಡಿಸುತ್ತೇನೆ. ಅಕ್ರಮ ಮರಳು ದಂಧೆ ಬಗ್ಗೆ ನಾನು ಸಾಕಷ್ಟು ಹೋರಾಟ ಮಾಡಿ ಬಡವರಿಗೆ ಮರಳು ಸಿಗುವಂತೆ ಮಾಡಿದ್ದೇನೆ. ನಾನು ಹೋರಾಟ ಮಾಡಿದ್ದರಿಂದ ಸಾಕಷ್ಟು ಪ್ರಕರಣ ನನ್ನ ಮೇಲೆ ದಾಖಲಾಗಿವೆ. ಎತ್ತಿನಗಾಡಿಯಲ್ಲಿ ಮರಳನ್ನು ಆಶ್ರಯ ಮನೆ ಕಟ್ಟಲು ಜನ ಒಯ್ಯುತ್ತಿದ್ದಾರೆ. ಅಂತಹವರ ಮರಳನ್ನು ಸೀಜ್ ಮಾಡಲು ನಾನು ಬಿಡುವುದಿಲ್ಲ ಎಂದು ಮತ್ತೆ ಎಸ್ಪಿಗೆ ಸವಾಲ್ ಹಾಕಿದರು.