ದಾವಣಗೆರೆ :ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಎಸ್.ಎ.ರವೀಂದ್ರನಾಥ್ ಅವರು ವಿಧಾನಸಭೆ ಚುನಾವಣಾ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ. ಚುನಾವಣೆಗೆ ಸ್ಪರ್ಧಿಸುವಂತೆ ಬೆಂಬಲಿಗರು ಒತ್ತಾಯಿಸಿದ್ದರೂ ಅನಾರೋಗ್ಯ ಕಾರಣದಿಂದ ಈ ನಿರ್ಧಾರ ಕೈಗೊಂಡಿರುವುದಾಗಿ ರವೀಂದ್ರನಾಥ್ ಹೇಳಿದ್ದಾರೆ.
ಕಳೆದ ನಾಲ್ಕು ದಶಕಗಳಿಂದ ಸಕ್ರಿಯ ರಾಜಕಾರಣದಲ್ಲಿರುವ ಇವರು, ದಾವಣಗೆರೆ ಉತ್ತರ ಮತಕ್ಷೇತ್ರದಿಂದ ಪಕ್ಷದ ವರಿಷ್ಠರು ಯಾರಿಗೆ ಟಿಕೆಟ್ ಕೊಡುತ್ತಾರೋ ಅವರ ಪರವಾಗಿ ಕೆಲಸ ಮಾಡುವುದಾಗಿ ಹೇಳಿದ್ದಾರೆ. ದಾವಣಗೆರೆ ಉತ್ತರ ಮತಕ್ಷೇತ್ರದ ಹಾಲಿ ಶಾಸಕರಾಗಿರುವ ಎಸ್.ಎ.ರವೀಂದ್ರನಾಥ್, ಮಾಯಕೊಂಡ ವಿಧಾನಸಭಾ ಕ್ಷೇತ್ರದಿಂದ 1994, 1999 ಹಾಗೂ 2004ರಲ್ಲಿ ಸ್ಪರ್ಧಿಸಿ ಮೂರು ಬಾರಿ ಶಾಸಕರಾಗಿ ಆಯ್ಕೆ ಆಗಿದ್ದರು. ಬಳಿಕ ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ 2008 ಹಾಗೂ 2018ರಲ್ಲಿ ಗೆದ್ದು, ಒಟ್ಟು ಐದು ಬಾರಿ ಶಾಸಕರಾಗಿದ್ದರು. ಇವರು ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಮತ್ತು ಯಡಿಯೂರಪ್ಪ ಅವರ ಆಡಳಿತಾವಧಿಯಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದ್ದರು.
ರವೀಂದ್ರನಾಥ್ ವರ ಪುತ್ರ ಬಸವರಾಜ್ ಶಿರಮಗೊಂಡನಹಳ್ಳಿ ಗ್ರಾಪಂ ಸದಸ್ಯರಾಗಿದ್ದು, ಓರ್ವ ಪುತ್ರಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆಯಾಗಿದ್ದರು. ಇನ್ನೋರ್ವ ಪುತ್ರಿ ಹಾಲಿ ಮಹಾನಗರ ಪಾಲಿಕೆ ಸದಸ್ಯೆಯಾಗಿದ್ದಾರೆ. ತನ್ನ ಕುಟುಂಬಸ್ಥರಿಗೆ ಟಿಕೆಟ್ ಕೇಳದೆ ಪಕ್ಷಕ್ಕಾಗಿ ದುಡಿಯುವುದಾಗಿ ಹೇಳಿದರು.