ದಾವಣಗೆರೆ: ಹೆಗ್ಗಣ, ಇಲಿ ಒಳಗೆ ಇಟ್ಕೊಂಡು ಗುದ್ದು ಮುಚ್ಚಿದರಂತೆ. ಇದು ಬೆಳಗಾವಿ ಕಡೆ ಚಾಲ್ತಿಯಲ್ಲಿರುವ ಮಾತು. ಕೊರೊನಾ ವಿಚಾರದಲ್ಲಿ ಸರ್ಕಾರ ನಡೆದುಕೊಳ್ಳುವ ರೀತಿಗೆ ಸರಿಯಾಗಿ ಅನ್ವಯಿಸುತ್ತದೆ ಎಂದು ಬೆಳಗಾವಿ ಗ್ರಾಮಾಂತರ ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ವ್ಯಂಗ್ಯವಾಡಿದರು.
ರಾಜ್ಯ ಸರ್ಕಾರದ ವಿರುದ್ಧ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಕಿಡಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರಿ ಆಸ್ಪತ್ರೆಗಳಲ್ಲಿ ಕೊರೊನಾ ಸೋಂಕಿತರಷ್ಟೇ ಅಲ್ಲ, ಇತರ ರೋಗಿಗಳಿಗೆ ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲ. ಹಾದಿಬೀದಿಯಲ್ಲಿ ಜನ ಸಾಯುವ ಸ್ಥಿತಿ ಎದುರಾಗಿದೆ. ತಮಿಳುನಾಡು, ಆಂಧ್ರಪ್ರದೇಶ ಹಾಗೂ ದೆಹಲಿಯಲ್ಲಿ ಕೊರೊನಾ ಹೇಗೆ ನಿಯಂತ್ರಿಸಲಾಗಿದೆ ಎಂಬುದನ್ನು ಗಮನಿಸಲು ಸರ್ಕಾರ ಹೋಗುತ್ತಿಲ್ಲ. ವೆಂಟಿಲೇಟರ್ಗಳನ್ನು ಮಾರುಕಟ್ಟೆಯಲ್ಲಿರುವ ಬೆಲೆಗಿಂತ ಹೆಚ್ಚಿನ ದರಕ್ಕೆ ಖರೀದಿ ಮಾಡಲಾಗಿದೆ.
ಬಿಜೆಪಿಯ ಮಾಜಿ ಶಾಸಕ ಡಾ.ಸಾರ್ವಭೌಮ ಬಗಲೆ ಅವರೇ ಬಿಜೆಪಿ ಸರ್ಕಾರ ಕಳಪೆ ಹಾಗೂ ಬಳಕೆ ಮಾಡಿದ ವೆಂಟಿಲೇಟರ್ ಖರೀದಿಸಿ ಭ್ರಷ್ಟಾಚಾರ ಎಸಗಿದೆ ಎಂಬ ಬಗ್ಗೆ ಲೋಕಾಯುಕ್ತರಿಗೆ ದಾಖಲೆ ಸಮೇತ ದೂರು ನೀಡಿದ್ದಾರೆ. ಇದಕ್ಕಿಂತ ಹೆಚ್ಚಿನ ಸಾಕ್ಷಿ ಬೇಕಾ ಎಂದು ಪ್ರಶ್ನಿಸಿದರು. ರಾಜ್ಯ ಸರ್ಕಾರದ ಸಚಿವರಲ್ಲಿ ಹೊಂದಾಣಿಕೆ, ಸಮನ್ವಯತೆ ಇಲ್ಲ. ಬಿ ಎಸ್ ಯಡಿಯೂರಪ್ಪ ತಮ್ಮ ಇಳಿ ವಯಸ್ಸಿನಲ್ಲಿ ಕೊರೊನಾ ತಡೆಗೆ ಹಗಲಿರುಳು ಶ್ರಮಿಸುತ್ತಿದ್ರೆ, ಉಳಿದವರಿಗೆ ಬೇರೆಯದ್ದೇ ಚಿಂತೆ ಇದೆ.
ಕೊರೊನಾ ಬಗ್ಗೆ ತೆಗೆದುಕೊಂಡಿರುವ ಕ್ರಮಗಳು ಹಾಗೂ ಖರ್ಚಿನ ಬಗ್ಗೆ ಚರ್ಚಿಸಲು ಅಧಿವೇಶನ ಕರೆಯುತ್ತಿಲ್ಲ. ಶ್ವೇತ ಪತ್ರವನ್ನೂ ಹೊರಡಿಸುತ್ತಿಲ್ಲ. ಸುಗ್ರೀವಾಜ್ಞೆ ತರುವ ಮೂಲಕ ತಮ್ಮ ಕೆಲಸ ಮಾಡಿಕೊಳ್ಳಲು ಮುಂದಾಗಿದೆ. ಕೊರೊನಾ ಹೆಸರಿನಲ್ಲಿ ಸರ್ಕಾರದ ಆಸ್ತಿ ಮಾರಲು ಹೊರಟಿದ್ದಾರೆ ಎಂದು ದೂರಿದರು.