ದಾವಣಗೆರೆ:ಭದ್ರಾ ಮೇಲ್ದಂಡೆ ಕಾಲುವೆ ನಿರ್ಮಾಣವಾಗಿ ಸುಮಾರು 60 ರಿಂದ 70 ವರ್ಷ ಕಳೆದಿದೆ. ಸದ್ಯ ಭದ್ರಾದ ಬಹುತೇಕ ನಾಲೆಗಳು ಶಿಥಿಲಗೊಂಡಿದ್ದು, ಕುಸಿದು ಬಿಳುವ ಹಂತಕ್ಕೆ ತಲುಪಿವೆ. ಕೆಲ ಸೇತುವೆಗಳ ಕೆಳಗೆ ಜೋಡಿಸಿದ ಕಲ್ಲುಗಳು ಈಗಾಗಲೇ ಕುಸಿದು ಬಿದ್ದಿವೆ. ಈ ಹಿನ್ನೆಲೆ ಮಾಯಕೊಂಡ ಶಾಸಕ ಕೆ ಎಸ್ ಬಸವಂತಪ್ಪ ಅವರು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಭದ್ರಾ ನಾಲೆ ಮತ್ತು ಸೇತುವೆಗಳನ್ನು ಪರಿಶೀಲಿಸಿ, ದುರಸ್ತಿ ಕಾರ್ಯಕ್ಕೆ ಅನುದಾನ ಬಿಡುಗಡೆ ಮಾಡಿಸುವ ಭರವಸೆ ನೀಡಿದರು.
ಶಾಸಕ ಕೆ ಎಸ್ ಬಸವಂತಪ್ಪ ಮಾತನಾಡಿ, "ಭದ್ರಾ ನಾಲೆ ವ್ಯಾಪ್ತಿಯಲ್ಲಿ ಬರುವ ಕಳೂರು, ಕುರ್ಕಿ, ನಲ್ಕುಂದ ಗ್ರಾಮ ಸೇರಿದಂತೆ ಮಾಯಕೊಂಡ ಕ್ಷೇತ್ರ ವ್ಯಾಪ್ತಿಯ ನಾಲೆಗೆ ನಿರ್ಮಿಸಿರುವ ಸೇತುವೆಗಳು ಹಾಳಾಗಿವೆ. ಕಳೆದ ವರ್ಷ ರೈತರು ಬಿತ್ತನೆ ಮಾಡಿ, ಗದ್ದೆಗಳಿಗೆ ನೀರು ಹರಿಸುವ ಸಂದರ್ಭದಲ್ಲಿ ನಲ್ಕುಂದ ನಾಲೆಯ ಸೇತುವೆ ಕುಸಿದಿದ್ದರಿಂದ ನೀರು ಬಂದ್ ಆಗಿತ್ತು. ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದರು" ಎಂದರು.
"ನಾವು ಈಗ ವೀಕ್ಷಣೆ ಮಾಡಿಕೊಂಡು ಬಂದ ಕಾಲುವೆ ಮತ್ತು ಸೇತುವೆಗಳನ್ನು ಭದ್ರಾ ನಾಲೆ ನಿರ್ಮಿಸಿದ ಸಮಯದಲ್ಲಿ ಕಟ್ಟಿರುವುದು. ಅವು ಸದ್ಯ ಶಿಥಿಲಗೊಂಡಿವೆ. ಇದರಿಂದ ಹೊಸದಾಗಿ ನಿರ್ಮಾಣ ಮಾಡಬೇಕಾಗಿದೆ. ಮಳೆಗಾಲದಲ್ಲಿ ಭದ್ರಾ ನಾಲೆಗೆ ನೀರು ಬಂದಾಗ, ನೀರಿನ ರಭಸಕ್ಕೆ ನಾಲೆಗಳ ಸೇತುವೆಗಳು ಕುಸಿಯುತ್ತವೆ. ನಾವು ಇಂದು ವೀಕ್ಷಣೆ ಮಾಡಿದ ನಾಲೆಗಳ ಸೇತುವೆಗಳು ಬಹುತೇಕ ಕುಸಿದಿವೆ. ಕೊಡಲೇ ಅವುಗಳನ್ನು ಪುನರ್ ನಿರ್ಮಾಣ ಮಾಡಿದರೆ ರೈತರಿಗೆ ಅನುಕೂಲವಾಗುತ್ತದೆ. ಮುಂದೆ ರೈತರು ಬಿತ್ತನೆ ಮಾಡಿ, ಫಸಲು ಪಡೆಯುವ ಸಂದರ್ಭದಲ್ಲಿ ನಾಲೆಗಳ ಸೇತುವೆಗಳು ಕುಸಿದರೆ ರೈತರಿಗೆ ಸಮಸ್ಯೆಯಾಗುತ್ತದೆ ಮತ್ತು ಸಾವಿರಾರು ಕೋಟಿ ನಷ್ಟ ಉಂಟಾಗುತ್ತದೆ" ಎಂದು ಹೇಳಿದರು.